

ಸವಣೂರ: ಮಾದಿಗ ಸಮಾಜದ ಒಳಮೀಸಲಾತಿ ಸಮೀಕ್ಷೆ ಕುರಿತು ತಾಲೂಕು ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಮಾದಿಗ ಸಮಾಜದ ಪ್ರಮುಖರು ಗುರುವಾರ ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ಅವರಿಗೆ ಮನವಿ ಸಲ್ಲಿಸಿದರು.
ಒಳಮೀಸಲಾತಿ ಹಂಚಿಕೆಗಾಗಿ ಸರ್ಕಾರ ಕೈಗೊಂಡಿರುವ ಪರಿಶಿಷ್ಟ ಜಾತಿಯ ಜನಗಣತಿಯಲ್ಲಿ ತಾಲೂಕು ಮಟ್ಟದಲ್ಲಿರುವ ಮಾದಿಗ ಸಮುದಾಯವನ್ನು ಬೇರೆ ಬೇರೆ ಜಾತಿಯ ಸಮಾಜದಡಿ ಗುರುತಿಸಲಾಗುತ್ತಿದೆ.
ಸಮಸ್ಯೆ ಬಗೆಹರಿಸಲು ಸದಾಶಿವ ಆಯೋಗದ ವರದಿಯಲ್ಲಿನ ಅಂಕಿ- ಅಂಶಗಳನ್ನು ಸರ್ಕಾರ ಪರಿಗಣನೆಗೆ ತೆಗೆದುಕೊಂಡು ಬಳಸಬಹುದಿತ್ತು. ಆದರೆ, ಸರ್ಕಾರ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸುವಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ಅವರ ಆಯೋಗದ ಶಿಫಾರಸನ್ನು ಒಪ್ಪಿದೆ. ಆದ್ದರಿಂದ ಜಾತಿಯಲ್ಲಿ ಉಪಜಾತಿಯನ್ನು ನಮೂದಿಸುವ ಬಗ್ಗೆ ಪರಿಶಿಷ್ಟ ಜಾತಿಯ ಸಮಾಜದವರಿಗೆ ಬಹಳಷ್ಟು ಗೊಂದಲ ಮೂಡಿಸಿದೆ. ಈ ಕುರಿತು ಸವಣೂರ ಪಟ್ಟಣ ಸೇರಿ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಒಳಮೀಸಲಾತಿ ಸಮೀಕ್ಷೆ ಕುರಿತು ಸ್ಪಷ್ಟವಾಗಿ ಧ್ವನಿವರ್ಧಕ, ಡಂಗುರ ಸಾರುವ ಮೂಲಕ ಮತ್ತು ಪತ್ರಿಕೆಗಳಲ್ಲಿ ಪ್ರಕಟಣೆ ನೀಡುವ ಮೂಲಕ ಮಾದಿಗ ಸಮಾಜದವರಿಗೆ ಅರಿವು ಮೂಡಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರಮುಖರಾದ ಲಕ್ಷ್ಮಣ ಕನವಳ್ಳಿ, ಶಿವಾನಂದ ಹುಲ್ಲಮ್ಮನವರ, ಶ್ರೀಕಾಂತ ಲಕ್ಷೆ್ಮೕಶ್ವರ, ಬಸವರಾಜ ಮೈಲಮ್ಮನವರ, ಆನಂದ ವಡಕಮ್ಮನವರ, ಪುಟ್ಟಪ್ಪ ಕ್ಯಾಡದ, ಪ್ರವೀಣ ಬಾಲೇಹೊಸೂರ, ನಾಗರಾಜ ಹರಿಜನ, ಗಂಗಪ್ಪ ಹರಿಜನ, ಪ್ರಶಾಂತ ಮುಗಳಿ, ಮನೋಜ ದೊಡ್ಡಮನಿ, ಅಪ್ಪಣ್ಣ ತೊಂಡೂರ, ಸುನೀಲ ಹರಿಜನ, ರಘು ಬಾಲೇಹೊಸೂರ, ಸತೀಶ ಮೈಲಮ್ಮನರ, ಮುತ್ತು ಲಕ್ಷೆ್ಮೕಶ್ವರ, ಉಮೇಶ ದೊಡ್ಡಮನಿ, ಮನೋಜ ಕನವಳ್ಳಿ, ಮಂಜು ಮೈಲಮ್ಮನವರ, ಲಕ್ಷ್ಮಣ ಮುಗಳಿ, ಇತರರಿದ್ದರು.