

ಮಲ್ಲಿಕಾರ್ಜುನ ಕೊಚ್ಚರಗಿ ಹಾಸನ
ಲಾಕ್‌ಡೌನ್‌ನಿಂದ ಕಳೆದ ಮೂರು ತಿಂಗಳಿಂದ ಉದ್ಯೋಗವಿಲ್ಲದೆ ಜೀವನೋಪಾಯಕ್ಕೆ ಪರದಾಡುತ್ತಿರುವ ಮೀನುಗಾರರಿಗೆ ಇದೀಗ ಮಳೆಗಾಲವೂ ಶಾಪವಾಗಿ ಪರಿಣಮಿಸಿದ್ದು, ಕೆಲಸವಿಲ್ಲದೆ ಜೀವನ ನಿರ್ವಹಣೆಯೇ ಕಷ್ಟವಾಗಿದೆ.
ಮುಂಗಾರು ಮಳೆ ಸಂದರ್ಭದಲ್ಲಿ ಮೀನುಗಳ ವಂಶಾಭಿವೃದ್ಧಿ ಚಟುವಟಿಕೆ ಕಾರಣದಿಂದ ಮೀನುಗಾರಿಕೆ ನಿಷೇಧಿಸಿ ಇಲಾಖೆ ಆದೇಶ ಹೊರಡಿಸಿದ್ದು, ಈ ವೃತ್ತಿಯನ್ನೇ ನಂಬಿಕೊಂಡಿರುವ ಹೇಮಾವತಿ ಜಲಾಶಯದ ಹಿನ್ನೀರಿನ 300ಕ್ಕೂ ಹೆಚ್ಚು ಕುಟುಂಬಗಳ ಸ್ಥಿತಿ ಚಿಂತಾಜನಕವಾಗಿದೆ. ಜೀವದ ಹಂಗು ತೊರೆದು ಮೀನುಗಾರಿಕೆಯಲ್ಲಿ ತೊಡಗುತ್ತಿದ್ದ ಕಸಬುದಾರರು ಈಗ ಹೊತ್ತು ಊಟಕ್ಕೂ ಪರದಾಡುತ್ತಿದ್ದಾರೆ.
ಪ್ರತಿವರ್ಷ 45 ಲಕ್ಷ ಮೀನು ಬಿಡಬೇಕು: ಮೀನುಗಾರಿಕೆಗೆ ಉತ್ತೇಜನಕಾರಿಯಾಗಿ ಜಲಾಶಯಕ್ಕೆ ಪ್ರತಿವರ್ಷ ಮೀನುಗಳನ್ನು ಬಿಡಲಾಗುತ್ತದೆ. ಆದರೆ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ವರ್ಷ ಮೀನುಗಳನ್ನು ಬಿಡುವ ಪ್ರಕ್ರಿಯೆಗೆ ಇನ್ನೂ ಚಾಲನೆ ನೀಡಿಲ್ಲ.
ಪ್ರತಿ ಬಾರಿ ಮೇನಲ್ಲಿ ಇಲಾಖೆಯಿಂದ ಇಷ್ಟೇ ಮೀನುಗಳನ್ನು ಬಿಡಬೇಕು, ಇಂತಿಷ್ಟು ಉತ್ಪಾದನೆ ಆಗಬೇಕು ಎಂಬ ಆದೇಶ ಬರುತ್ತಿತ್ತು. 9162 ಹೆಕ್ಟೆರ್ ಪ್ರದೇಶ ವಿಸ್ತಾರವನ್ನು ಹೇಮಾವತಿ ಜಲಾಶಯ ಹೊಂದಿದ್ದು, ಪ್ರತಿ ಒಂದು ಹೆಕ್ಟೇರ್‌ಗೆ 500 ಮೀನಿನ ಮರಿಗಳನ್ನು ಬಿಡಬೇಕು. ಪ್ರತಿವರ್ಷ ಕನಿಷ್ಠ 45 ಲಕ್ಷ ಮೀನುಗಳನ್ನಾದರೂ ನೀರಿಗೆ ಬಿಟ್ಟರೆ ಮಾತ್ರ ಮೀನುಗಾರರ ದುಡಿಮೆಗೆ ನೆರವಾಗಲಿದೆ. ಆದರೆ, ಮೀನುಗಾರಿಕೆ ಇಲಾಖೆ ಒಂದು ಬಾರಿಯೂ ನಿಗದಿತ ಮರಿಗಳನ್ನು ನದಿಗೆ ಬಿಟ್ಟಿಲ್ಲ.
ಮೀನುಗಾರಿಕೆ ಇಲಾಖೆ ವರದಿಯ ಪ್ರಕಾರ 2015-16ರಲ್ಲಿ ಕಾಟ್ಲಾ 2.97 ಲಕ್ಷ, ರೋಹು 4.965 ಲಕ್ಷ, ಮೃಗಾಲ 1.48 ಲಕ್ಷ ಸಾಮಾನ್ಯ ಗೆಂಡೆ 1.6 ಲಕ್ಷ ಸೇರಿ 11.05 ಲಕ್ಷ ಮೀನಿನ ಮರಿಗಳನ್ನು ಬಿಡಲಾಗಿದೆ. 2016-17ನೇ ಸಾಲಿನಲ್ಲಿ 75 ಸಾವಿರ ಕಾಟ್ಲಾ, 5.36 ಲಕ್ಷ ರೋಹು, 55 ಸಾವಿರ ಮೃಗಾಲ, 3.03 ಲಕ್ಷ ಸಾಮಾನ್ಯ ಗೆಂಡೆ ಸೇರಿ 9.7 ಲಕ್ಷ ಹಾಗೂ 2017-18ರಲ್ಲಿ 2.97 ಲಕ್ಷ ಕಾಟ್ಲಾ, 4.87 ರೋಹು, ಮೃಗಾಲ 1.97 ಲಕ್ಷ, 1.86 ಲಕ್ಷ ಹುಲ್ಲುಗೆಂಡೆ ಸೇರಿ 11.6 ಲಕ್ಷ ಮೀನು ಬಿಡಲಾಗಿದೆ.
ಮೀನುಗಾರಿಕೆ ಮಾಡಲು ಇಲಾಖೆಯಿಂದ ಪರವಾನಗಿ ಪಡೆಯುತ್ತಿರುವವರ ಸಂಖ್ಯೆಯು ಕಡಿಮೆಯಾಗುತ್ತಿದೆ. 2015-16ರಲ್ಲಿ 140 ಜನ ಪರವಾನಗಿ ಪಡೆದಿದ್ದರೆ 2016-17ರ ಸಾಲಿನಲ್ಲಿ 201 ಜನ ಪಡೆದುಕೊಂಡಿದ್ದರು. ಆದರೆ, 2017-18ನೇ ಸಾಲಿನಲ್ಲಿ ಕೇವಲ 71 ಜನರು ಮೀನುಗಾರಿಕೆಗೆ ಪರವಾನಗಿ ಪಡೆದಿದ್ದಾರೆ. ಈ ವರ್ಷ ಅವರ ಪ್ರಮಾಣದಲ್ಲಿ ಭಾರಿ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ವಾರ್ಷಿಕ 3200 ರೂ. ಪಾವತಿಸಿ ಮೀನು ಹಿಡಿಯಲು ಅನುಮತಿ ಪಡೆಯುವ ಕಸಬುದಾರರಿಗೆ ಇಲಾಖೆ ಯಾವುದೇ ಸೌಲಭ್ಯ ನೀಡುವುದಿಲ್ಲ. ಆದ್ದರಿಂದ ಲೈಸನ್ಸ್ ಪಡೆಯದೆ ಮೀನುಗಾರಿಕೆಯಲ್ಲಿ ತೊಡಗಿರುವವರ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ.
ಸರ್ಕಾರದ ಯೋಜನೆಗಳು: ಉದ್ಯೋಗ ಸೃಷ್ಟಿ, ಆಹಾರ ಉತ್ಪಾದನೆ ಹಾಗೂ ನೈಸರ್ಗಿಕ ಜಲಸಂಪನ್ಮೂಲಗಳ ರಕ್ಷಣೆಗಾಗಿ ಮೀನುಗಾರಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಮೀನುಗಾರಿಕೆ ಸಲಕರಣೆ ಕಿಟ್‌ಗಳ ಖರೀದಿಗಾಗಿ ಸಹಾಯಧನ ಯೋಜನೆಯಡಿ 10 ಸಾವಿರ ರೂ. ಮೌಲ್ಯದ ಸಾಮಗ್ರಿ ವಿತರಿಸುವುದು. ನಿರ್ವಸತಿ ಮೀನುಗಾರರಿಗೆ ಮನೆ ನಿರ್ಮಿಸಿಕೊಳ್ಳಲು 1.20 ಲಕ್ಷ ರೂ. ಸಹಾಯಧನ. ಪ್ರಾತ್ಯಕ್ಷಿಕೆ, ತರಬೇತಿ ಮತ್ತು ಕ್ಷೇತ್ರ ವೀಕ್ಷಣೆ ಕಾರ್ಯಕ್ರಮ. ಸಕ್ರಿಯ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿರುವವರಿಗೆ ಉಚಿತವಾಗಿ ಜೀವರಕ್ಷಕ ಸಲಕರಣೆ ವಿತರಣೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಯಾವ ಮೀನುಗಾರರಿಗೂ ಈ ಸೌಲಭ್ಯ ತಲುಪಿಲ್ಲ. ಅನಕ್ಷರಸ್ಥ ಮೀನುಗಾರರು ಪ್ರಗತಿಪರ ಯೋಜನೆಗಳಿಂದ ದೂರ ಉಳಿದಿದ್ದಾರೆ.
ಮೀನುಗಾರಿಕೆಗೆ ನಿಷೇಧ: ಮುಂಗಾರು ಮಳೆಗಾಲ ಅವಧಿಯಲ್ಲಿ ಮೀನುಗಳ ವಂಶಾಭಿವೃದ್ಧಿ ಚಟುವಟಿಕೆ ನಡೆಯುವುದರಿಂದ ಮೀನುಗಾರಿಕೆ ಚಟುವಟಿಕೆ ನಿಷೇಧಿಸಲಾಗಿದೆ. ಹೇಮಾವತಿ ಜಲಾಶಯ ಹಾಗೂ ಸರ್ವಋತು ಕೆರೆ, ತೊರೆ, ನದಿಗಳಲ್ಲಿ ಮೀನು ಹಿಡಿಯುವುದನ್ನು ನಿಷೇಧಿಸಿ ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಲಾಕ್‌ಡೌನ್ ಹಾಗೂ ಮಳೆಗಾಲ ಅವಧಿಯಲ್ಲಿ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿಯೂ ಕೆಲವರು ಮೀನು ಹಿಡಿದು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಆದಾಯ ಪಡೆದಿದ್ದಾರೆ. ಸರ್ಕಾರದ ಆದೇಶ ಪಾಲಿಸುವುದು ನಮ್ಮ ಕರ್ತವ್ಯ. ಮೀನುಗಾರಿಕೆಗೆ ಅನುಮತಿ ನೀಡುವುದಿಲ್ಲ.
ಆರ್.ವಿವೇಕ್, ಹಿರಿಯ ಸಹಾಯಕ ನಿರ್ದೇಶಕ ಮೀನುಗಾರಿಕೆ ಇಲಾಖೆ
ಇಲಾಖೆಯ ನಿರ್ಲಕ್ಷೃದಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಸಮುದ್ರದ ಮೀನುಗಾರರಿಗೆ ಮಾತ್ರ ಆಹಾರ ಕಿಟ್, ಪರಿಹಾರ ಘೋಷಿಸಿದ್ದಾರೆ. ನದಿಗಳಲ್ಲಿ ಮೀನು ಹಿಡಿಯುವವರನ್ನು ಯೋಜನೆಗೆ ಪರಿಗಣಿಸಬೇಕಿತ್ತು.
ರಾಜು, ಮಂದ್ರ ಗ್ರಾಮದ ಮೀನುಗಾರ
ಹೇಮಾವತಿ ಜಲಾಶಯದಲ್ಲಿ ಮೀನುಗಾರಿಕೆ ವೃತ್ತಿಯಲ್ಲಿ 300 ಕುಟುಂಬಗಳು ತೊಡಗಿದ್ದು, ಶಿಳ್ಳೆಕ್ಯಾತ ಸಮುದಾಯಕ್ಕೆ ಸೇರಿದ 89 ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿವೆ. ಈ ವೃತ್ತಿ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಅವರಿಗೆ ಮೀನು ಹಿಡಿಯಲು ಅವಕಾಶ ಕೊಡಬೇಕು ಇಲ್ಲವೇ ಸೂಕ್ತ ಪರಿಹಾರ ಕಲ್ಪಿಸಬೇಕು.
ಮರಿಜೋಸೆಫ್, ಹೋರಾಟಗಾರ