

ಸಂದೀಪ್ ಸಾಲ್ಯಾನ್ ಬಂಟ್ವಾಳ
ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಮೆಸ್ಕಾಂ ಕಚೇರಿಯ ಹಿಂಭಾಗದಲ್ಲಿ ಮಳೆ ನೀರು ಸಂಗ್ರಹಗೊಂಡು ದಿಢೀರ್ ಕೃತಕ ನೆರೆ ಸೃಷ್ಟಿಯಾಗಿದೆ.
ಮಳೆ ನೀರು ಹರಿದು ಹೋಗುವ ಚರಂಡಿಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ಮಣ್ಣು ತುಂಬಿಕೊಂಡು ನೀರು ಹರಿದು ಹೋಗಲು ಸಾಧ್ಯವಾಗದೆ ಈ ಅವಾಂತರ ಉಂಟಾಗಿದೆ. ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತಿದ್ದು, ಸ್ಥಳೀಯರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಕೈಕುಂಜೆಯ ಮೆಸ್ಕಾಂ ಕಚೇರಿಯ ಹಿಂಭಾಗ ತಗ್ಗು ಪ್ರದೇಶವಿದೆ. ಇಲ್ಲಿ ಹದಿನೈದಕ್ಕಿಂತಲೂ ಅಧಿಕ ಮನೆಗಳಿವೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಸಾಧಾರಣ ಮಳೆಗೆ ಈ ಪ್ರದೇಶದಲ್ಲಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿದೆ. ಒಂದೆರಡು ಜೋರು ಮಳೆಯಾದರಂತೂ ನೀರೆಲ್ಲ ಸ್ಥಳೀಯ ಮನೆಗಳಿಗೆ ನುಗ್ಗುವ ಆತಂಕ ಇದೆ. ಈವರೆಗೆ ಮಳೆಗಾಲದಲ್ಲಿ ಇಲ್ಲದ ಸಮಸ್ಯೆ ಈ ಬಾರಿ ಹೇಗೆ ಉಂಟಾಯಿತು? ಎನ್ನುವ ಆತಂಕ ಸ್ಥಳೀಯರನ್ನು ಕಾಡಲಾರಂಭಿಸಿದೆ. ಮನೆ ಮುಂದೆಯೇ ನೀರು ನಿಂತು ಅದರಲ್ಲಿ ಪ್ಲಾಸ್ಟಿಕ್, ತ್ಯಾಜ್ಯಗಳು, ಕೊಳಚೆ ಸೇರಿಕೊಂಡು ದುರ್ವಾಸನೆ ಬೀರುತ್ತಿವೆ.
ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಿಂದಾಗಿ ಈ ಸಮಸ್ಯೆ ಸೃಷ್ಟಿಯಾಗಿದೆ ಎನ್ನುವುದು ಸ್ಥಳೀಯರ ಆರೋಪ. ಈ ಹಿಂದೆ ಈ ಭಾಗದ ಮಳೆ ನೀರೆಲ್ಲಾ ಚರಂಡಿಯ ಮೂಲಕ ಲಯನ್ಸ್ ಕ್ಲಬ್ ಹಿಂಭಾಗ ಹರಿದು ರಾಜಕಾಲುವೆಯ ಮೂಲಕ ನದಿ ಸೇರುತ್ತಿತ್ತು. ಈಗ ರಾಷ್ಟ್ರೀಯ ಹೆದ್ದಾರಿಯ ಕೆಲಸ ನಡೆಯುತ್ತಿದ್ದು ಮಳೆಗೆ ಅದರ ಮಣ್ಣೆಲ್ಲಾ ಚರಂಡಿಯಲ್ಲಿ ತುಂಬಿಕೊಂಡು ನೀರು ಹರಿದು ಹೋಗಲು ಸಾಧ್ಯವಾಗದೆ ಇಲ್ಲಿಯೇ ನಿಂತಿದೆ ಎನ್ನುತ್ತಾರೆ.
ಸ್ಥಳೀಯ ಗುತ್ತಿಗೆದಾರರೊಬ್ಬರು ಸಣ್ಣ ಹಿಟಾಚಿ ತಂದು ಹೂಳು ಬಿಡಿಸಿಕೊಟ್ಟು ನೀರು ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ನಡೆಸಿದರೂ ಸಾಧ್ಯವಾಗದೆ ವಾಪಸ್ಸಾಗಿದ್ದಾರೆ. ಕೃತಕ ನೆರೆಯ ಬಗ್ಗೆ ಸ್ಥಳೀಯರು ಬಂಟ್ವಾಳ ತಹಸೀಲ್ದಾರ್ ಅವರ ಗಮನಕ್ಕೆ ತಂದಿದ್ದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಕೆಎನ್‌ಆರ್ ಸಂಸ್ಥೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಮಳೆ ಬಿಸಿಲಿನ ಆಟಕ್ಕೆ ಡೆಂಘೆ, ಮಲೇರಿಯಾದಂತಹ ಮಾರಣಾಂತಿಕ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಇಲ್ಲಿ ನೀರು ಹರಿದು ಹೋಗದಿರುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಚರಂಡಿಯಲ್ಲಿ ತುಂಬಿರುವ ಹೂಳು ತೆರವುಗೊಳಿಸಲು ದೊಡ್ಡ ಕಾರ್ಯಾಚರಣೆಯೇ ಆಗಬೇಕಿದೆ.
ಮನೆಯ ಮುಂದೆಯೇ ಕೃತ ನೆರೆ ಸೃಷ್ಟಿಯಾಗಿ ಸ್ಥಳೀಯರಿಗೆ ರೋಗ ಭೀತಿ ಎದುರಾಗಿದೆ. ಈ ಅವ್ಯವಸ್ಥೆಯ ಬಗ್ಗೆ ತಾಲೂಕಾಡಳಿತದಲ್ಲಿರುವ ಅಧಿಕಾರಿಗಳ ಗಮನಕ್ಕೆ ತಂದರೂ ಗಂಭೀರವಾಗಿ ಪರಿಗಣಿಸಿಲ್ಲ. - -ಶ್ರೀನಿವಾಸ ಶೆಣೈ, ಕೂಡಿಬೈಲು ಸ್ಥಳೀಯ ನಿವಾಸಿ https://www.vijayavani.net/capt-chouta-temple