

ವಿಜಯವಾಣಿ ಸುದ್ದಿಜಾಲ ಸುಳ್ಯ
ಬ್ಯಾಂಕ್ ಆಫ್ ಬರೋಡ ವತಿಯಿಂದ ಪ್ರವರ್ತಿಸಲ್ಪಟ್ಟ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ವಿಜಯ ಗ್ರಾಮಾಭಿವೃದ್ಧಿ ಸಮಿತಿ ನಾಲ್ಕೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾಲ್ಕೂರು ಒಕ್ಕೂಟ, ಯುವಜನ ಸಂಯುಕ್ತ ಮಂಡಳಿ ಸುಳ್ಯ, ಸುದ್ದಿ ಕೃಷಿ ಸೇವಾ ಕೇಂದ್ರ ಸುಳ್ಯ, ಅರಣ್ಯ ಇಲಾಖೆ ಸುಬ್ರಮಣ್ಯ, ಆತ್ಮರೈತ ಮಿತ್ರ ಮಹಿಳಾ ಸ್ವಸಹಾಯ ಸಂಘ ನಾಲ್ಕೂರು ಹಾಗೂ ಇತರ ಸಂಘ ಸಂಸ್ಥೆಗಳ ನೆರವಿನೊಂದಿಗೆ ಮಳೆನೀರು ಕೊಯ್ಲು ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರ ಮತ್ತು ಹಣ್ಣಿನ ಗಿಡ ವಿತರಣಾ ಕಾರ್ಯಕ್ರಮ ಹಾಲೆಮಜಲು ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.
ನಾಲ್ಕೂರು ಶಾಖೆಯ ಉಪ ವಲಯಾರಣ್ಯಾಧಿಕಾರಿ ಸದಾಶಿವ ಸಿಂದಿಗಾರ್ ಉದ್ಘಾಟಿಸಿ, ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರುತ್ತಿರುವ ತಾಪಮಾನದಿಂದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಪ್ರಕೃತಿ ನಾಶ ಹೊಂದಲು ಇದು ದೊಡ್ಡ ಕಾರಣವಾಗುತ್ತಿದೆ ಎಂದರು.
ಸುದ್ದಿ ಕೃಷಿ ಅರಿವು ಕೇಂದ್ರ ಸ್ಥಾಪಕ ಡಾ.ಯು.ಪಿ.ಶಿವಾನಂದ ಕುಡಿಯಲು ಯೋಗ್ಯವಾದ ಮತ್ತು ಶುದ್ಧ ಮಳೆಯ ನೀರನ್ನು ಶೇಖರಿಸುವ ವಿಧಾನಗಳ ಕುರಿತು ಮಾಹಿತಿ ನೀಡಿದರು. ನಾಲ್ಕೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಆರ್.ಉದಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ, ಆತ್ಮ ರೈತ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಗೀತಾ, ನಾಲ್ಕೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಕಾರ್ಯದರ್ಶಿ ದಿನೇಶ್ ಹಾಲೆಮಜಲು ಉಪಸ್ಥಿತರಿದ್ದರು.
ದಿನೇಶ್ ಹಾಲೆಮಜಲು ಸ್ವಾಗತಿಸಿ, ವಂದಿಸಿದರು. ಚರಣ್ ದೇರಪ್ಪಜ್ಜನಮನೆ ನಿರೂಪಿಸಿದರು. ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಮಿತಿಯ ಸದಸ್ಯರು, ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಪದಾಧಿಕಾರಿಗಳು ಸದಸ್ಯರು, ಸ್ಥಳೀಯ ಹಿರಿಯ ಕಿರಿಯ ಕೃಷಿಕರು ಭಾಗವಹಿಸಿದ್ದರು. ಪುತ್ತೂರು ಕೃಷಿ ಕೇಂದ್ರದ ಚೈತ್ರ ಮಧುಚಂದ್ರ, ಕುಶಾಲಪ್ಪ ಗೌಡ ಹಾಗೂ ಸಂಘಟಕರು ಸಹಕರಿಸಿದರು
2022 - 23ನೇ ಶೈಕ್ಷಣಿಕ ವರ್ಷದ ಬಿ ಕಾಂ ಅಂತಿಮ ವರ್ಷದಲ್ಲಿ 10ನೇ ರ್ಯಾಂಕ್ ಪಡೆದ ಗುತ್ತಿಗಾರು ಗ್ರಾಮದ ಶ್ರಾವ್ಯಾ ಮುತ್ಲಾಜೆ ಅವರನ್ನು ಸನ್ಮಾನಿಸಿ ಸನ್ಮಾನಪತ್ರವನ್ನು ನೀಡಿ ಗೌರವಿಸಲಾಯಿತು. ಯೋಗೀಶ್ ಹೊಸೊಳಿಕೆ ಸನ್ಮಾನಪತ್ರ ವಾಚಿಸಿದರು.