

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಂಗಳವಾರ ರಾತ್ರಿಯಿಂದಲೇ ಸುರಿಯುತ್ತಿರುವ ಮಳೆ ಮುಂದುವರಿದಿದ್ದು, ಬುಧವಾರ ಸಂಜೆ ಸುರಿದ ಧಾರಾಕಾರ ಮಳೆ ನಗರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ.
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಕೆಲ ಹೊತ್ತು ಸುರಿದ ಮಳೆ ಕೆಲ ಸಮಯ ಬಿಡುವು ನೀಡಿತ್ತು. ಸಂಜೆ ಹೊತ್ತಿಗೆ ಮತ್ತೆ ಆರಂಭವಾದ ಮಳೆ ರಾತ್ರಿವರೆಗೂ ಗುಡುಗು, ಮಿಂಚು ಸಹಿತ ಸುರಿದ ಪರಿಣಾಮ ಕೆಲ ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರೆ, ಮುಖ್ಯ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಗಿತ್ತು.
ನಗರದ ಭಾವಿಕಟ್ಟಿ ಪ್ಲಾಟ್, ಮಾಕಡವಾಲೆ ಪ್ಲಾಟ್, ಬಸವನಗರ, ಗೌಡರ ಕಾಲನಿ, ಸಿ.ಬಿ. ನಗರ, ಸರೋವರನಗರ, ಸಿದ್ದಾರೂಢ ಕಾಲನಿ, ಜಾಧವ ಲೇಔಟ್, ಸಾಧುನವರ ಎಸ್ಟೇಟ್ ಸುತ್ತಲಿನ ಪ್ರದೇಶ ಸೇರಿ ಇನ್ನೂ ಕೆಲ ಬಡಾವಣೆಗಳಲ್ಲಿನ ಮನೆಗಳಿಗೆ ನೀರು ನುಗ್ಗಿವೆ. ಮನೆಯಲ್ಲಿನ ಎಲ್ಲ ವಸ್ತುಗಳು ನೀರಿನಲ್ಲಿ ಮುಳುಗಿದ್ದು, ನಿವಾಸಿಗಳು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಲೇ ನೀರು ಹೊರಹಾಕುವ ಕಾರ್ಯದಲ್ಲಿ ತೊಡಗಿದ್ದರು.
ಇನ್ನು ಎನ್ಟಿಟಿಎಫ್, ಟೋಲ್ನಾಕಾ ಮುಖ್ಯ ರಸ್ತೆಗಳು ಸಂರ್ಪೂಣ ಜಲಾವೃತವಾಗಿದ್ದರಿಂದ ವಾಹನ ಚಲಾಯಿಸಲು ಸವಾರರು ಹೈರಾಣಾಗಿದ್ದರು. ಇನ್ನು ಬಸವನಗರ, ಭಾವಿಕಟ್ಟಿ ಪ್ಲಾಟ್ ಬಡಾವಣೆಗಳ ರಸ್ತೆಗಳು ಸಹ ನೀರಿನಿಂದ ತುಂಬಿದ್ದರಿಂದ ಜನರು ಮನೆಗಳಿಂದ ಹೊರ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲೂ ಹೊಲ, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.