ಮೈಸೂರಿನಲ್ಲಿ ಮಳೆ ಆರ್ಭಟ: ಮಲೆನಾಡಿನ ಅನುಭವ

mysore
Published on

ಮೈಸೂರು: ಸಾಂಸ್ಕೃತಿನ ನಗರಿ ಮೈಸೂರಿನಲ್ಲಿ ಮಳೆ ಆರ್ಭಟ ಸೋಮವಾರವೂ ಮುಂದುವರಿಯಿತು. ಮಳೆಯ ಸಿಂಚನದಿಂದ ಜನರಿಗೆ ಮಲೆನಾಡಿನ ಅನುಭವವಾಯಿತು.


ನಗರದ ಕೆಲವೆಡೆ ಬೆಳಗ್ಗೆ 9ರಿಂದಲೇ ಮಳೆಯಾದರೆ ಇನ್ನೂ ಕೆಲವೆಡೆ ಕಪ್ಪನೆ ಮೋಡ ಕವಿದುಕೊಂಡಿತ್ತು. ಮಧ್ಯಾಹ್ನ 12ರ ಸುಮಾರಿಗೆ ತುಂತುರು ಮಳೆಯ ಸಿಂಚನ ಆರಂಭವಾಯಿತು. ಮಧ್ಯಾಹ್ನ 2 ಗಂಟೆ ಬಳಿಕ ಧಾರಾಕಾರ ಮಳೆಯಾಯಿತು. ಸತತ ಎರಡು ತಾಸು ವರ್ಷಧಾರೆ ಅಬ್ಬರಿಸಿತು. ಸಂಜೆ ಬಳಿಕ ಕೊಂಚ ಶಾಂತವಾದ ಮಳೆ ಜಿಟಿ ಜಿಟಿ ಸುರಿಯಿತು.


ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ಮಳೆ ಪ್ರಾರಂಭವಾಗುತ್ತಿದ್ದಂತೆ ಜನರು ಮನೆ ಸೇರಿಕೊಂಡರು. ಕೆಲವರು ಬಸ್ ನಿಲ್ದಾಣ, ಕಟ್ಟಡಗಳು ಸೇರಿದಂತೆ ಮರಗಳ ಬಳಿ ಆಶ್ರಯ ಪಡೆದರು. ಇನ್ನೂ ಕೆಲವರು ಮಳೆಗೆ ಸಿಕ್ಕು ನೆನೆದರು. ಮಳೆಯಿಂದ ನಗರದ ದೇವರಾಜ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಫಜೀತಿ ಅನುಭವಿಸಿದರು. ಹಣ್ಣು-ತರಕಾರಿ ಮಾರಾಟಗಾರರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಯಿತು. ಸಯ್ಯಜಿರಾವ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳು, ಪಾನೀಪುರಿ, ಗೋಬಿ ಸೇರಿದಂತೆ ಹಲವು ಚಾಟ್‌ಸೆಂಟರ್ ಮಾಲೀಕರು ಟಾರ್ಪಾಲ್ ಕಟ್ಟಿಕೊಂಡು ಕೆಲ ಸಮಯ ವ್ಯಾಪಾರ ಮಾಡಿದರು.


ಮಳೆಯಿಂದಾಗಿ ನಗರದ ಪ್ರಮುಖ ಬಡಾವಣೆಗಳು, ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು. ನಗರದ ಐಶ್ವರ್ಯ ಬಡಾವಣೆ, ಬೋಗಾದಿ, ಸಿಫ್‌ಟಿಆರ್‌ಐ ಬಡಾವಣೆ, ಮೇದಾರ ಬ್ಲಾಕ್, ಶಾಂತಿನಗರ, ಗಾಂಧಿನಗರ, ಉದಯಗಿರಿ, ಬನ್ನಿಮಂಟಪ ಸೇರಿದಂತೆ ಬಹುತೇಕ ಕಡೆಗಳಲ್ಲಿ ತಗ್ಗು ಪ್ರದೇಶಗಳ ಕೆಲ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಪರದಾಡುವಂತಾಯಿತು.

ನಗರದ ಹೃದಯಭಾಗ ಕೆ.ಆರ್.ವೃತ್ತ, ಹಾರ್ಡಿಂಜ್ ವೃತ್ತ, ಸಯ್ಯಜಿರಾವ್ ರಸ್ತೆ, ಶಿವರಾಂಪೇಟೆ, ದೇವರಾಜ ಅರಸು ರಸ್ತೆ, ಅಗ್ರಹಾರದ ಪ್ರಮುಖ ಕಡೆಗಳ ರಸ್ತೆಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯಿತು. ಹೀಗಾಗಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಅಲ್ಲದೆ ಮಳೆ ನೀರಿನಿಂದ ಭರ್ತಿಯಾಗಿದ್ದ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಹರಸಾಹಸಪಟ್ಟರು. ಫುಡ್ ಡೆಲವರಿ ಕೆಲಸ ಮಾಡುವವರು ಸೇರಿ ಇತರರು ಮಳೆಯಲ್ಲಿ ನೆನೆದು ಕೆಲಸ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿತು.

ಉಷ್ಣಾಂಶ ಧಿಡೀರ್ ಕುಸಿತ


ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ತಾಪಮಾನ ಇಳಿಕೆಯಾಗಿದೆ. 15 ದಿನಗಳ ಮುನ್ನ ಉರಿಕೆಂಡದಂಥ ಬಿಸಿಲು ಸಾರ್ವಜನಿಕರನ್ನು ಹೈರಾಣ ಮಾಡಿತ್ತು. ಮನೆಯಿಂದ ಹೊರಬರಲಾಗದಂತಹ ಧಗೆ ತೀವ್ರವಾಗಿ ಕಾಡಿತ್ತು. ಇದೀಗ ವಾತಾವರಣದಲ್ಲಿ ಸಂಪೂರ್ಣ ಏರುಪೇರಾಗಿದೆ. ಎರಡು ವಾರಗಳ ಹಿಂದೆ 40 ಡಿಗ್ರಿ ಸೆಲ್ಸಿಯಸ್ ಇದ್ದ ಉಷ್ಣಾಂಶ 29 ರಿಂದ 22 ಡಿಗ್ರಿ ಸೆಲ್ಸಿಯಸ್‌ಗೆ ಬರುವ ಮೂಲಕ ವಾತಾವರಣವನ್ನು ಹಿತಗೊಳಿಸಿದ್ದು, ಮುಂದಿನ 2 ದಿನಗಳು ಇದೇ ರೀತಿಯ ವಾತಾವರಣ ಇರಲಿದೆ.

ಇನ್ನೂ 2 ದಿನ ವರುಣ ಕೃಪೆ


ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮೇ 18ರಿಂದ ಮೈಸೂರು ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆಯಾಗುತ್ತಿದ್ದು, ಮೇ 22ರವರೆಗೆ ವರುಣ ಸಿಂಚನ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.

ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಜಿಟಿ ಜಿಟಿ ಮಳೆಯಾಗಲಿದ್ದು, ಗರಿಷ್ಠ ಉಷ್ಣಾಂಶ 30 ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 21.6-22.2 ಸೆಲ್ಸಿಯಸ್ ವರೆಗೆ ದಾಖಲಾಗಿದೆ. ಬೆಳಗ್ಗೆ ಗಾಳಿ ತೇವಾಂಶ ಶೇ.88-92 ಪ್ರಮಾಣವಾದರೆ, ಮಧ್ಯಾಹ್ನದ ತೇವಾಂಶ ಶೇ.53.69ರವರೆಗೆ ಇದೆ ಎಂದು ಹವಾಮಾನ ಇಲಾಖೆಯ ತಿಳಿಸಿದೆ. ಮುಂದಿನ ಎರಡು ದಿನಗಳು ಮಳೆ ಮುಂದುವರಿಯುವುದರಿಂದ ಸಾರ್ವಜನಿಕರು ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ಲಭ್ಯ


ಮೈಸೂರು ತಾಲೂಕಿನ ಕಸಬಾ, ವರುಣ, ಜಯಪುರ ಮತ್ತು ಇಲವಾಲ ರೈತಸಂಪರ್ಕ ಕೇಂದ್ರಗಳಲ್ಲಿ ಅಲಸಂದೆ, ಹೆಸರು ಮತ್ತು ಉದ್ದು ಬೆಳೆಗಳ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ.


ರೈತರು ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಬಹುದು. ಉದ್ದು, ಅಲಸಂದೆ ಮತ್ತು ಹೆಸರು ಬೆಳೆ ಪ್ರತಿ ಕೆಜಿಗೆ ಸಾಮಾನ್ಯ ವರ್ಗದವರಿಗೆ 25 ರೂ., ಎಸ್ಸಿ-ಎಸ್ಟಿಯವರಿಗೆ 37.50 ರೂ. ಸಹಾಯಧನವಿದ್ದು,

ಉದ್ದು ಪ್ರತಿ ಕೆ.ಜಿ. ಗೆ ಸಾಮಾನ್ಯ ವರ್ಗಕ್ಕೆ 132 ರೂ. ಎಸ್ಸಿ-ಎಸ್ಟಿ ವರ್ಗಕ್ಕೆ 119.50 ರೂ., ಅಲಸಂದೆ ಬೆಳೆಗೆ ಸಾಮಾನ್ಯ ವರ್ಗದವರಿಗೆ 110 ರೂ., ಎಸ್ಸಿ-ಎಸ್ಟಿಗೆ 97.50 ರೂ., ಮತ್ತು ಹೆಸರು ಬೆಳೆಗೆ ಸಾಮಾನ್ಯ ವರ್ಗದವರಿಗೆ 161 ರೂ., ಎಸ್ಸಿ-ಎಸ್ಟಿಗೆ 148.50 ರೂ.ಗೆ ರೈತರ ವಂತಿಕೆಯನ್ನು ನೀಡಲಾಗುವುದು. ಸೆಣಬು ಬೀಜ ಮತ್ತು ಟರ್ಪಾಲಿನ್‌ಗಳನ್ನು ಸಹಾಯಧನದಡಿ ಪಡೆದುಕೊಳ್ಳಬಹುದು ಎಂದು ಮೈಸೂರಿನ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net