

ಬೆಂಗಳೂರು: ದೀಪಾವಳಿ ಸಂಭ್ರಮದ ನಡುವೆಯೂ ರಾಜ್ಯದ ಹಲವೆಡೆ ಸುರಿಯುತ್ತಿರುವ ಹಿಂಗಾರು ಮಳೆ, ಸೋಮವಾರವೂ ಮುಂದುವರಿದಿದೆ.ದಕ್ಷಿಣ ಕರ್ನಾಟಕ ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲಿ ಈಶಾನ್ಯ ಮಾನ್ಸೂನ್ ಇನ್ನಷ್ಟು ಪ್ರಬಲಗೊಂಡಿದೆ. ಇದರ ಪರಿಣಾಮದಿಂದ ಮುಂದಿನ 5 ದಿನ ಆ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಆರ್ಭಟ ಇರಲಿದೆ.
ಹಾಸನದ ಅರಕಲಗೂಡು, ಬೇಲೂರು, ಶಿವಮೊಗ್ಗದ ಆನವಟ್ಟಿ, ತುಮಕೂರಿನ ಕುಣಿಗಲ್, ಕಿಬ್ಬನಹಳ್ಳಿ, ಸಿರಾ, ದಕ್ಷಿಣ ಕನ್ನಡದ ಶಕ್ತಿ ನಗರ, ಬೆಳ್ತಂಗಡಿ, ಮೂಡುಬಿದರೆ, ಚಿಕ್ಕಮಗಳೂರಿನ ಕಡೂರು, ಕಮ್ಮರಡಿ, ಎನ್.ಆರ್. ಪುರ, ಕೊಪ್ಪ ಹಾಗೂ ಮಂಡ್ಯದ ಬೆಳ್ಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ವರ್ಷಧಾರೆಯಾಗಿತ್ತು.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ತುಮಕೂರಿನಲ್ಲಿ ಅ.21ರಿಂದ ಅ.23ರವರೆಗೆ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಕೊಟ್ಟಿದೆ. ಈ ಸಂದರ್ಭದಲ್ಲಿ 204 ಮಿಮೀವರೆಗೆ ಮಳೆಯಾಗುವ ಸಾಧ್ಯತೆ ಇದೆ. ಗಂಟೆಗೆ 55 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಈ ಅವಧಿಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸದಂತೆ ಮೀನುಗಾರರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಬೆಂ.ದಕ್ಷಿಣ, ಮೈಸೂರಿನಲ್ಲಿ ಮುಂದಿನ 3 ದಿನ, ಕೋಲಾರ, ಚಿತ್ರದುರ್ಗ, ಹಾವೇರಿ, ದಾವಣಗೆರೆ, ಧಾರವಾಡದಲ್ಲಿ ಅ.21ರಂದು ಯೆಲ್ಲೋ ಅಲರ್ಟ್ ಇರಲಿದೆ. ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಚಿಕ್ಕಬಳ್ಳಾಪುರದಲ್ಲಿ ಅ.23ರಿಂದ ಅ.25ರವರೆಗೆ ಜೋರು ಮಳೆಯಾಗುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕ್ಷೀಣವಾಗಿ ಒಣಹವೆ ಮುಂದುವರಿದಿದೆ.