

ಪಿರಿಯಾಪಟ್ಟಣ: ತಾಲೂಕಿನಾದ್ಯಂತ ಭಾನುವಾರ ರಾತ್ರಿ ಮತ್ತು ಸೋಮವಾರ ಗುಡುಗು ಸಹಿತ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.
ಪಟ್ಟಣ ಸೇರಿದಂತೆ ತಾಲೂಕಿನ ಹಾರನಹಳ್ಳಿ, ರಾವಂದೂರು, ಕಸಬಾ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಮಳೆಯಾಗಿದೆ. ಕಂಪಲಾಪುರ, ಬಸಲಾಪುರ, ಕಿರನಲ್ಲಿ, ಹುಣಸೆಕುಪ್ಪೆ, ಮೆಲ್ಲಹಳ್ಳಿ, ಬೂದಿತಿಟ್ಟು, ಮಾಲಂಗಿ, ಆನೆಚೌಕೂರು ಅರಣ್ಯ ಪ್ರದೇಶ, ಪಾರೆ ಕೊಪ್ಪಲು, ಅಂಕನಹಳ್ಳಿ, ಮುತ್ತೂರು, ಬೇಗೂರು, ಮಾಗಳಿ, ನಂದಿನಾಥಪುರ, ಹುಣಸವಾಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸೋಮವಾರ ಮುಂಜಾನೆ 4 ರಿಂದ 6 ಗಂಟೆವರೆಗೆ ಉತ್ತಮ ಮಳೆಯಾಗಿದೆ.
ಕಳೆದ ವಾರ ತಾಲೂಕಿನಲ್ಲಿ ಗರಿಷ್ಠ ಉಷ್ಣಾಂಶ 36-38 ಡಿಗ್ರಿ ತಲುಪಿದ್ದು, ಸೋಮವಾರ 25 ಡಿಗ್ರಿಗೆ ಇಳಿಯುವ ಮೂಲಕ ಬಿಸಿಲಿನ ಬೇಗೆಯಿಂದ ಬೆಂದಿದ್ದ ಜನರಿಗೆ ನೆಮ್ಮದಿ ತರಿಸಿದೆ. ಸೋಮವಾರ ಇಡೀ ದಿನ ಮೋಡ ಮುಸುಕಿದ ವಾತಾವರಣ ಇತ್ತು. ಕೃಷಿ ಚಟುವಟಿಕೆ ಚುರುಕು ಪಡೆದುಕೊಂಡಿದ್ದು, ತಾಲೂಕಿನ ಹಲವೆಡೆ ತಂಬಾಕು ನಾಟಿಯಲ್ಲಿ ರೈತರು ನಿರತರಾಗಿದ್ದಾರೆ. ಹಲವು ತಿಂಗಳಿಂದ ಮಳೆ ಇಲ್ಲದೆ ಬೋರ್‌ವೆಲ್‌ಗಳಲ್ಲೂ ಸಮರ್ಪಕವಾಗಿ ನೀರು ಸಿಗದೆ ಬೆಳೆಗಳಿಗೆ ನೀರು ಹಾಯಿಸಲು ಪರಿತಪಿಸುತ್ತಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ.