ಹೊಸಕೋಟೆಯಲ್ಲಿ ಮಳೆ ಅವಾಂತರ

web
Published on

ಸೋಂಪುರ ಸೊಣದೇನಹಳ್ಳಿಯಲ್ಲಿ ಕುಸಿದು ಬಿದ್ದ ಮನೆ, ರಸ್ತೆಗಳು ಜಲಾವೃತ

ಹೊಸಕೋಟೆ: ತಾಲೂಕಿನ ಹಲವೆಡೆ ಗುರುವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು, ದೊಡ್ಡಹುಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಂಪುರ ಸೊಣದೇನಹಳ್ಳಿಯಲ್ಲಿ ನೀಲಮ್ಮ ಅವರು ವಾಸವಿದ್ದ ಮನೆ ಕುಸಿದಿದೆ. ಅದೃಷ್ಟವಶಾತ್​ ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.
ರಸ್ತೆಗಳು ಜಲಾವೃತ: ಮಳೆಗಾಲಕ್ಕೂ ಮುನ್ನ ಚರಂಡಿಗಳಲ್ಲಿ ಕಸಕಡ್ಡಿ ತೆರವುಗೊಳಿಸಬೇಕಾದ ನಗರಸಭೆ ಜಾಣಕುರುಡು ಪ್ರದರ್ಶಿಸಿದ್ದರಿಂದ ಚರಂಡಿಗಳಲ್ಲಿ ಹರಿಯಬೇಕಾದ ಮಳೆ ನೀರು ರಸ್ತೆಗಳಲ್ಲಿ ಹರಿದು ರಸ್ತೆಗಳು ಜಲಾವೃತಗೊಂಡಿದ್ದವು. ಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದರಿಂದ ವಾಹನ ಸವಾರರು ಪರದಾಡಿದರು. ಎಲ್ಲಿ ಗುಂಡಿಯಿದೆ ಎಂಬುದನ್ನು ಅರಿಯದ ವಾಹನ ಸವಾರರು ಭಯದಲ್ಲೇ ಸಂಚರಿಸುತ್ತಿದ್ದ ದೃಶ್ಯ ಕಂಡುಬಂದವು. ಆಯತಪ್ಪಿ ಬಿದ್ದ ಹಲವರು ಗುಂಡಿ ಮುಚ್ಚದ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.
ಪಾದಚಾರಿ ಮಾರ್ಗ ಕೆಸರುಗದ್ದೆ: ನಗರದ ಪ್ರಮುಖ ರಸ್ತೆಯ ಎರಡೂ ಬದಿಗಳಲ್ಲಿನ ಪಾದಚಾರಿ ಮಾರ್ಗಗಳು ಕೆಸರು ಗದ್ದೆಯಂತಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಎದುರಾಗಿತ್ತು. ಕೆಸರು ತುಳಿದುಕೊಂಡೇ ಸರ್ಕಸ್​ ಮಾಡುತ್ತ ಸಾಗುವಂತಾಯಿತು. ಇನ್ನು ಪಾದಚಾರಿ ಮಾರ್ಗಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಅಲ್ಲಿ ನಡೆಯಲೂ ಆಗದೆ ಇತ್ತ ಕಡೆ ರಸ್ತೆ ಮಧ್ಯೆಯೇ ಜೀವಭಯದಲ್ಲಿ ಸಂಚರಿಸುತ್ತಿದ್ದ ದೃಶ್ಯಗಳು ಕಂಡುಬಂತು.
ಕೆಲ ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಮಳೆ ಜೋರಾದ ಕೂಡಲೇ ದ್ವಿಚಕ್ರ ವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡಿದ್ದರಿಂದ ಇನ್ನಿತರ ವಾಹನಗಳ ಸಂಚಾರಕ್ಕೆ ಅಡಚಣೆ ಎದುರಾಯಿತು.
ಸರ್ಕಾರಕ್ಕೆ ಮೊರೆ: ಸೋಂಪುರ ಸೊಣದೇನಹಳ್ಳಿ ಗ್ರಾಮದಲ್ಲಿ ಮನೆ ಕುಸಿದಿಂದ ಕಂಗಾಲಾಗಿರುವ ನೀಲಮ್ಮ ಕುಟುಂಬದವರು ಪರಿಹಾರ ನೀಡುವಂತೆ ಸರ್ಕಾರದ ಮೊರೆ ಹೋಗಿದ್ದಾರೆ. ಮಗ ಹಾಗೂ ಮಗಳೊಂದಿಗೆ ವಾಸವಾಗಿರುವ ಬಡಕುಟುಂಬದ ನೀಲಮ್ಮ ಮನೆಯಿಲ್ಲದೆ ಬೀದಿಗೆ ಬರುವಂತಾಗಿದ್ದು, ಅಧಿಕಾರಿಗಳು ತುರ್ತಾಗಿ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

ಚರಂಡಿಗಳಲ್ಲಿ ಕಸಕಡ್ಡಿ ತೆರವುಗೊಳಿಸದ ಪರಿಣಾಮ ಸಣ್ಣ ಮಳೆಯಾದರೂ ನೀರು ರಸ್ತೆಯಲ್ಲಿ ಹರಿಯುತ್ತದೆ. ಇನ್ನು ಪಾದಚಾರಿ ಮಾರ್ಗಗಳು ಸಮರ್ಪಕವಾಗಿಲ್ಲದ ಪರಿಣಾಮ ಕೆಸರುಗದ್ದೆಯಂತಾಗುತ್ತದೆ. ಮಳೆಗಾಲದಲ್ಲಿ ಪಾದಚಾರಿ ಮಾರ್ಗದಲ್ಲಿ ಸಂಚರಿಸುವುದೇ ಕಷ್ಟ ಎನ್ನುವಂತಾಗಿದೆ. ವಾಹನಗಳ ನಿಲುಗಡೆ ಹಾಗೂ ವ್ಯಾಪಾರಿಗಳ ಒತ್ತುವರಿಯಿಂದ ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ. ರಾಜಶೇಖರಯ್ಯ ಹೊಸಕೋಟೆ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net