

ಬೆಂಗಳೂರು: ರಾಜ್ಯಾದ್ಯಂತ ಮಳೆ ಚುರುಕಾಗಿದ್ದು, ಬುಧವಾರ ಶಿವಮೊಗ್ಗದ ಆಗುಂಬೆಯಲ್ಲಿ 12 ಸೆಂಮೀ ಬಿದ್ದಿದೆ. ಕೊಡಗಿನ ಗೋಣಿಕೊಪ್ಪ, ಚಿಕ್ಕಮಗಳೂರಿನ ಮೂಡಗೆರೆ, ಬೀದರ್ನ ಔರದ್ನಲ್ಲಿ ಧಾರಾಕಾರವಾಗಿ ಸುರಿದಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಜು.6ರಿಂದ ಜು.8ರವರೆಗೆ ಭಾರಿ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯೆಲ್ಲೋ ಅರ್ಲಟ್ ನೀಡಲಾಗಿದೆ.ಕರ್ನಾಟಕದ ಕರಾವಳಿ ಉದ್ದಕ್ಕೂ ಮತ್ತು ಹೊರಗೆ ಪ್ರತಿ ಗಂಟೆಗೆ 55 ಕಿ.ಮೀ.ವೇಗದಲ್ಲಿ ತೀವ್ರ ಬಿರುಗಾಳಿ ಬೀಸಲಿದೆ. ದಕ್ಷಿಣ ಕನ್ನಡದಿಂದ ಕರಾವಳಿಗೆ, ಮುಲ್ಕಿಯಿಂದ ಮಂಗಳೂರಿನವರೆಗೆ ಹೈ ವೇವ್ ವಾಚ್ ಅರ್ಲಟ್ ನೀಡಲಾಗಿದೆ. ಸಮುದ್ರದಲ್ಲಿ ಎತ್ತರ ಅಲೆಗಳು ಏಳುವ ಹಿನ್ನೆಲೆಯಲ್ಲಿ ಮೀನುಗಾರಿಕೆ ನಡೆಸದಂತೆ, ಸಮುದ್ರ ದಡದಲ್ಲಿ ಪ್ರವಾಸಿಗರ ತೆರಳದಂತೆ ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಬೆಳಗಾವಿ, ಧಾರವಾಡದಲ್ಲಿ ಮುಂದಿನ ನಾಲ್ಕು ದಿನ, ಹಾವೇರಿಯಲ್ಲಿ ಜು.6ರಿಂದ ಜು.8ರವರೆಗೆ ಯೆಲ್ಲೋ ಅರ್ಲಟ್ ಇರಲಿದೆ. ದಕ್ಷಿಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಸಾಧಾರಣ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಬೆಂಗಳೂರಿನಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ.
ರಾಜ್ಯ ಹವಾಮಾನ ಇಲಾಖೆ ಹಿರಿಯ ಅಧಿಕಾರಿ ಸಿ.ಎಸ್.ಪಾಟೀಲ್ ಮಾತನಾಡಿ,ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಇದೀಗ ಮುಂಗಾರು ಚುರುಕಾಗಿದೆ. ಕರಾವಳಿ, ಮಲೆನಾಡಲ್ಲಿ ಈಗಾಗಲೇ ಧಾರಾಕಾರವಾಗಿ ಮಳೆಯಾಗುತ್ತಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ. ಹಲವು ಜಿಲ್ಲೆಗಳಲ್ಲಿ ಶೀತಗಾಳಿ ಬೀಸುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದರು.