ಮಳೆ ಸಮಸ್ಯೆಗಳು, ಧರೆಗುರುಳಿ ಬಿದ್ದ ಮರ, ವಿದ್ಯುತ್ ಸ್ಪರ್ಶಕ್ಕೆ ಯುವಕ ಬಲಿ

24CBP6rain
ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾ.ಪಂ.ಕಚೇರಿ ಸಮೀಪದ ಅಶ್ವತ್ಥಕಟ್ಟೆಯಲ್ಲಿನ ಬೃಹತ್ ಮರವೊಂದು ಧರೆಗುರುಳಿ ಬಿದ್ದಿರುವುದು.
Published on

ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧೆಡೆ ಶುಕ್ರವಾರ ಉತ್ತಮ ಮಳೆಯಾಗಿದ್ದು ಅಲ್ಲಲ್ಲಿ ಜಲಾವೃತ್ತ, ಮರಗಳು ಧರೆಗುರುಳಿ ಬಿದ್ದಿರುವುದು ಸೇರಿದಂತೆ ನಾನಾ ಸಮಸ್ಯೆಗಳು ಕಂಡು ಬಂದಿವೆ.
ಜಿಲ್ಲಾ ಕೇಂದ್ರದಲ್ಲಿ ಸಂಜೆ 4 ರಿಂದಲೇ ತುಂತುರು ಹನಿಗಳೊಂದಿಗೆ ಪ್ರಾರಂಭವಾದಂತಹ ಮಳೆಯು ಬಿಟ್ಟು ಬಿಟ್ಟು ತಡರಾತ್ರಿಯವರೆಗೂ ಸುರಿಯಿತು. ಜಿಲ್ಲಾದ್ಯಂತ ಮೋಡ ಮುಸುಕಿದ ವಾತಾವರಣ ಕಂಡು ಬಂತು.

*ಅಜ್ಜವಾರದಲ್ಲಿ ಬಿದ್ದ ಮರ
ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾ.ಪಂ.ಕಚೇರಿ ಸಮೀಪದ ಅಶ್ವತ್ಥಕಟ್ಟೆಯಲ್ಲಿನ ಬೃಹತ್ ಮರವೊಂದು ಧರೆಗುರುಳಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸಂಜೆ ಗುಡುಗಿನೊಂದಿಗೆ ಮಳೆ ಪ್ರಾರಂಭವಾಗುತ್ತಿದ್ದಂತೆ ಮರ ದಿಢೀರನೇ ಉರುಳಿ ಬಿತ್ತು. ಇದರಿಂದ ಭಾರಿ ಶಬ್ಧ ಕೇಳಿ ಬಂದಿದ್ದು ಗ್ರಾಮಸ್ಥರು ಆತಂಕದಲ್ಲಿ ಓಡಿ ಬಂದಿದ್ದಾರೆ. ಇನ್ನು ಸಮೀಪದಲ್ಲಿ ಗ್ರಾ.ಪಂ.ಕಚೇರಿ, ಮನೆಗಳ ಮೇಲೆ ಮರ ಬಿದ್ದಿದ್ದರೆ ದೊಡ್ಡ ಹಾನಿ ಉಂಟಾಗುತ್ತಿತ್ತು. ರಸ್ತೆಗೆ ಅಡ್ಡಲಾಗಿ ಬಿದ್ದ ಹಿನ್ನೆಲೆಯಲ್ಲಿ ಕೆಲ ಸಂಚಾರಕ್ಕೆ ತೊಂದರೆಯಾಯಿತು.

*ವಿದ್ಯುತ್ ಸ್ಪರ್ಶಕ್ಕೆ ಬಲಿ
ಚಿಕ್ಕಬಳ್ಳಾಪುರ ತಾಲೂಕಿನ ಕಣಿತಹಳ್ಳಿಯಲ್ಲಿ ಯುವಕನೊಬ್ಬ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗ್ರಾಮದ ಮೋಹನ್ (24) ಮೃತ. ಬೆಳಿಗ್ಗೆ ಗ್ರಾಮದ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸಲು ಹೋಗಿದ್ದ. ಇದೇ ವೇಳೆ ವಿದ್ಯುತ್ ತಂತಿ ಕಡಿದು ಗಿಡಗಳ ಮೇಲೆ ಬಿದ್ದಿದ್ದನ್ನು ಕಾಣದೇ ಸ್ಪರ್ಶಿಸಿದ್ದು ಸ್ಥಳದಲ್ಲಿ ಕರಕಲಾಗಿ ಸುಟ್ಟು ಮೃತಪಟ್ಟಿದ್ದಾನೆ. ಬೆಸ್ಕಾಂ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದ್ದು ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net