

ಕೊಪ್ಪಳ: ನಗರ ಸೇರಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಸೋಮವಾರ ಕೆಲ ಸಮಯ ಮಳೆಯಾಯಿತು. ಆಷಾಡ ಮುಗಿದಿದ್ದು, ಶ್ರಾವಣ ಆರಂಭ ಹಿನ್ನೆಲೆ ವರುಣನ ದರ್ಶನವಾಗಿದ್ದು ರೈತರಲ್ಲಿ ನಿರೀೆ ಹೆಚ್ಚಿಸಿದೆ.
ಜೂನ್ನಲ್ಲಿ ಜಿಲ್ಲಾದ್ಯಂತ ಉತ್ತಮ ಹಾಗೂ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಆದರೆ, ಜುಲೈನಲ್ಲಿ ಮಳೆ ಕೈಕೊಟ್ಟಿದೆ. ಇದರಿಂದ ಬಿತ್ತಿದ ಬೆಳೆಗಳು ಒಣಗುವ ಸ್ಥಿತಿ ನಿರ್ಮಾಣವಾಗಿದೆ. ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು ನೀರಾವರಿ ಭಾಗದ ರೈತರಲ್ಲಿ ಹರ್ಷ ಮೂಡಿಸಿದೆ. ಆದರೆ, ಒಣ ಬೇಸಾಯ ಆಧಾರಿತ ಪ್ರದೇಶಗಳಿಗೆ ತೀವ್ರ ಮಳೆ ಕೊರತೆ ಕಾಡುತ್ತಿದೆ. ಈ ವಾರದಲ್ಲಿ ಉತ್ತಮ ಮಳೆ ಆಗದಿದ್ದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಸೋಮವಾರ ಕೊಪ್ಪಳ ನಗರ ಹಾಗೂ ಸುತ್ತಲಿನ ಕೆಲ ಗ್ರಾಮದಲ್ಲಿ ಅಲ್ಪ ಮಳೆಯಾಗಿದ್ದು, ರೈತರಲ್ಲಿ ಮತ್ತೆ ಭರವಸೆ ಮೂಡುವಂತೆ ಮಾಡಿದೆ.