ಜಿಲ್ಲೆಯಲ್ಲಿ ಅಬ್ಬರಿಸಿದ ವರ್ಷಧಾರೆ

raining
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಾದ್ಯಂತ ಮಂಗಳವಾರ ಉತ್ತಮ ಮಳೆಯಾಗಿದ್ದು, ಮುಂಜಾನೆಯಿಂದ ಜಿಟಿಜಿಟಿ ಸುರಿಯುತ್ತಿದ್ದ ಮಳೆ ಮಧ್ಯಾಹ್ನದ ವೇಳೆಗೆ ಬಿರುಸು ಪಡೆಯಿತು.
ಕಳೆದೆರಡು ದಿನಗಳಿಂದ ಮೋಡ ಮುಸುಕಿದ ವಾತಾವರಣವಿದ್ದರೂ ಮಳೆರಾಯ ಕೃಪೆ ತೋರಿರಲಿಲ್ಲ. ಬಿತ್ತನೆ ಕಾರ್ಯಕ್ಕೆ ಮೀನಮೇಷ ಎಣಿಸುತ್ತಿದ್ದ ರೈತಾಪಿ ಜನರು ಆಗಸವನ್ನೇ ದಿಟ್ಟಿಸಿನೋಡುತ್ತಿದ್ದರು. ಮಂಗಳವಾರ ಸುರಿದ ಮಳೆಯಿಂದಾಗಿ ಕೃಷಿಕರು ಸಂತಸಗೊಂಡಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಲು ಉತ್ಸುಕರಾಗಿದ್ದಾರೆ.
ರಸ್ತೆಗಳು ಜಲಾವೃತ:
ಭಾರಿ ಮಳೆಯಿಂದಾಗಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿನ ರಸ್ತೆಗಳು ಜಲಾವೃತಗೊಂಡವು. ಚರಂಡಿಗಳಲ್ಲಿ ನೀರು ಉಕ್ಕಿ ಹರಿದು ರಸ್ತೆಗಳಲ್ಲಿ ಹರಿದ ಪರಿಣಾಮ ಪಾದಚಾರಿಗಳು ರಸ್ತೆ ದಾಟಲು ಪರದಾಡುವಂತಾಯಿತು. ಪ್ರಮುಖ ವೃತ್ತಗಳಲ್ಲಿ ನೀರು ನಿಂತು ಸುಗಮ ವಾಹನ ಸಂಚಾರಕ್ಕೂ ತೊಂದರೆ ಎದುರಾಯಿತು. ಜೋರು ಮಳೆ ಸುರಿದ ಪರಿಣಾಮ ದ್ವಿಚಕ್ರ ವಾಹನ ಸವಾರರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿ ಮಳೆಯಿಂದ ರಕ್ಷಣೆ ಪಡೆಯಲು ಅಂಗಡಿ-ಮುಂಗಟ್ಟುಗಳನ್ನು ಆಶ್ರಯಿಸಿದರು. ಪರಿಣಾಮವಾಗಿ ಕೆಲಕಾಲ ಟ್ರಾಫಿಕ್ ಕಿರಿಕಿರಿ ಎದುರಿಸುವಂತಾಯಿತು.
ಕೆರೆಕಟ್ಟೆಗಳಿಗೆ ಹರಿದ ನೀರು:
ಕಳೆದ ಸಾಲಿನಲ್ಲಿ ಕೋಡಿ ಹರಿದಿದ್ದ ಕೆರೆಗಳಲ್ಲಿ ಭಾಗಶಃ ನೀರು ಇಂಗಿದ್ದು, ಮಂಗಳವಾರ ಸುರಿದ ಮಳೆಗೆ ಕೆರೆಗಳಲ್ಲಿನ ಹಳ್ಳಕೊಳ್ಳಗಳಲ್ಲಿ ನೀರು ತುಂಬಿಕೊಂಡಿದೆ. ಜಾನುವಾರುಗಳ ಕುಡಿಯುವ ನೀರಿಗೂ ಪರದಾಡುವಂತಾಗಿದ್ದ ಪರಿಸ್ಥಿತಿಯಲ್ಲಿ ಉತ್ತಮ ಮಳೆಯಾಗಿರುವುದು ರೈತಾಪಿ ವರ್ಗದಲ್ಲಿ ಮಂದಹಾಸ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net