ಕೊಡಗಿನಲ್ಲಿ ನಾಳೆ ಶಾಲೆ, ಕಾಲೇಜು ರಜೆ

06mdk07
Published on

ಮಡಿಕೇರಿ
ಬುಧವಾರ (ಜು.೫) ರಾತ್ರಿಯಿಂದಲೇ ಜಿಲ್ಲೆಯ ವಿವಿಧೆಡೆ ಭಾರಿ ಮಳೆ ಆಗುತ್ತಿದೆ. ಕಾವೇರಿ ಉಗಮಸ್ಥಾನ ತಲಕಾವೇರಿ ವ್ಯಾಪ್ತಿಯಲ್ಲಿ ಒಂದೇ ರಾತ್ರಿ ೧೪೦ ಮಿಮೀಗಳಷ್ಟು ಮಳೆ ದಾಖಲಾಗಿದೆ. ಭಾಗಮಂಡಲ ಸುತ್ತಮುತ್ತಲಿನ ಪ್ರದೇಶದಲ್ಲೂ ವ್ಯಾಪಕ ಮಳೆ ಸುರಿಯುತ್ತಿದ್ದು, ಭಾಗಮಂಡಲದಲ್ಲಿ ಭಾಗಮಂಡಲದಿಂದ ನಾಪೋಕ್ಲು ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ಸುಮಾರು ೧.೫ ಅಡಿ ನೀರು ಹರಿಯುತ್ತಿದೆ. ತ್ರಿವೇಣಿ ಸಂಗಮ ಜಲಾವೃತವಾಗಿದೆ. ಕೊಡಗಿನ ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.

ಮಳೆಯ ಪ್ರಮಾಣ ಇದೇ ರೀತಿಯಲ್ಲಿ ಮುಂದುವರಿದರೆ ಭಾಗಮಂಡಲದಿಂದ ನಾಪೋಕ್ಲು ಮತ್ತು ಭಾಗಮಂಡಲದಿಂದ ಮಡಿಕೇರಿ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆಯಿದ್ದು, ತ್ರಿವೇಣಿ ಸಂಗಮ ಕ್ಷೇತ್ರ ಈ ವರ್ಷದ ಮಳೆಗಾಲಕ್ಕೆ ಮೊದಲ ಬಾರಿಗೆ ದ್ವೀಪವಾಗುವ ಎಲ್ಲಾ ಸಾಧ್ಯತೆಗಳಿಗವೆ. ಈ ಬೆನ್ನಲ್ಲೇ ಸಾರ್ವಜನಿಕರು ಓಡಾಟಕ್ಕೆ ಅಪೂರ್ಣ ಪ್ಲೈ ಓವರ್ ಬಳಸುತ್ತಿದ್ದಾರೆ.

ಶುಕ್ರವಾರ ಮತ್ತು ಶನಿವಾರ ದಕ್ಷಿಣ ಒಳನಾಡಿದಲ್ಲಿ ಭಾರಿ ಮಳೆ ಮುಂದುವರಿಯಲಿದ್ದು, ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಕಾವೇರಿ ನದಿ ಮೈತುಂಬಿಕೊಳ್ಳಲಾರಂಭಿಸಿದ್ದು, ಕೊಟ್ಟಮುಡಿ, ಭೇತ್ರಿ, ಬಲಮುರಿ. ನೆಲ್ಯಹುದಿಕೇರಿ, ದುಬಾರೆ, ಕುಶಾಲನಗರದಲ್ಲಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿದೆ. ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಭೂದಾನ ಪೈಸಾರಿ ಎಂಬಲ್ಲಿ ಮರಿಯಾ ಲಲಿತಾ ಎಂಬುವವರಿಗೆ ಸೇರಿದ ಮನೆಯ ಮೇಲೆ ಮರ ಬಿದ್ದು ಹಾನಿ ಆಗಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ.

ರಾಷ್ಟ್ರೀಯ ಹೆದ್ದಾರಿ ೨೭೫ರ ಮಡಿಕೇರಿ, ಸಂಪಾಜೆ ಮಧ್ಯೆ ಕೊಯನಾಡುವಿನಲ್ಲಿ ಅರಣ್ಯ ಇಲಾಖೆ ಕಚೇರಿ ಬಳಿ ಹೆದ್ದಾರಿ ಕುಸಿಯುವ ಭೀತಿ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿ ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಲಾಗಿದ್ದು, ಪಕ್ಕದ ಬದಲಿ ರಸ್ತೆಯಲ್ಲಿ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net