

ಮೊಳಕಾಲ್ಮೂರು ಕೆ.ಕೆಂಚಪ್ಪ
ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಕಾರಣ ಜೂನ್ ತಿಂಗಳಲ್ಲಿ ಶುರುವಾಗಬೇಕಿದ್ದ ನೆಡುತೋಪು (ಅರಣ್ಯೀಕರಣ) ಕಾರ್ಯಕ್ಕೆ ಹಿನ್ನಡೆಯಾಗಿದೆ.
ಬಯಲುಸೀಮೆ ಪ್ರದೇಶದಲ್ಲಿ ಕಾಯ್ದಿಟ್ಟ ಅರಣ್ಯ ವಿಸ್ತರಣೆಗೆ ಪ್ರತಿ ವರ್ಷ ಮುಂಗಾರಿನಲ್ಲಿ ವಿವಿಧ ಜಾತಿಯ ಸಸಿಗಳ ನೆಡುತೋಪಿನೊಂದಿಗೆ
ನೈಸರ್ಗಿಕ ಸಂಪತ್ತು ಉಳಿಸಿ, ಬೆಳೆಸುವ ಕಾರ್ಯವನ್ನು ಅರಣ್ಯ ಇಲಾಖೆ ಕೈಗೆತ್ತಿಕೊಳ್ಳುತ್ತಿದೆ.
ಇದಕ್ಕಾಗಿ ಮೊಳಕಾಲ್ಮೂರು ಸಸ್ಯಕ್ಷೇತ್ರ ನರ್ಸರಿಯಲ್ಲಿ ವಿವಿಧ ಜಾತಿಯ ಲಕ್ಷಾಂತರ ಸಸಿಗಳನ್ನ ಬೆಳೆಸಲಾಗಿದೆ.
ಕಳೆದೆರಡು ವರ್ಷದ ಅವಧಿಯಲ್ಲಿ ಸುರಿದ ಮಳೆಗೆ ಶೇ.30ರಷ್ಟು ಅರಣ್ಯ ವಿಸ್ತರಣೆಯಾಗಿದೆ. ಅದೇ ಖುಷಿಯಲ್ಲಿ ಈ ವರ್ಷ ನೆಡುತೋಪು ಮಾಡಲು 50 ಸಾವಿರ ಸಸಿಗಳನ್ನ ಆರೈಕೆ ಮಾಡಲಾಗಿದೆ.
ರೈತರ ಜಮೀನುಗಳಲ್ಲೂ ಬೆಳೆಸಲು ರಿಯಾಯಿತಿ ದರದಲ್ಲಿ ವಿತರಣೆಗೆಂದು 65 ಸಾವಿರ ಸಸಿ ಪೋಷಣೆ ಮಾಡಲಾಗಿದೆ.
ತಾಲೂಕು ವ್ಯಾಪ್ತಿಯ ಬಾಂಡ್ರಾವಿ, ಕೃಷ್ಣ ರಾಜಾಪುರ, ಬಿ.ಜಿ.ಕೆರೆ ಕಮರ ಕಾವಲು, ಸಂತೇಬಂಡೆ, ಹಿರೇ ಅಡವಿ, ಕೋನಸಾಗರ, ಓಬಣ್ಣನಹಳ್ಳಿ ಮತ್ತಿತರೆಡೆ ಕಾಯ್ದಿಟ್ಟ ಅರಣ್ಯ ಪ್ರದೇಶ 15 ಸಾವಿರ ಹೆಕ್ಟೇರ್ ಇದೆ.
ಅತಿ ಹೆಚ್ಚು ಸಮೃದ್ಧವಾಗಿ ಬೆಳೆದಿರುವುದು ಬಾಂಡ್ರಾವಿ ಅರಣ್ಯ ಇದರ ಸಂರಕ್ಷಣೆ ಹೊಣೆ ಹೊತ್ತಿದ್ದ ಅರಣ್ಯ ಸಂರಕ್ಷಕ ಮೇಟಿ ನಾಗಪ್ಪ ಅವರ ಸೇವೆಯ ಶ್ರಮ ಶಾಶ್ವತವಾಗಿ ಹೆಸರು ಪಡೆದುಕೊಂಡಿದೆ.
ನಾನಾ ಜಾತಿಯ ಸಸಿಗಳ ಪಾಲನೆ: ಮಲ್ಲೂರಹಳ್ಳಿ, ಕಮರ ಕಾವಲು, ಓಬಣ್ಣನಹಳ್ಳಿ ಆರಣ್ಯದಲ್ಲಿ ಆಯ್ದ ಕಡೆ ನೆಡುತೋಪು ಮಾಡಲೆಂದು
ಸೀತಾಫಲ, ಸಾಗುವಾನಿ, ನೇರಳೆ, ಬೆಟ್ಟದನೆಲ್ಲಿ, ರಕ್ತ ಚಂದನ, ಬೇವು, ಶ್ರೀಗಂಧ, ಹೊಂಗೆ, ಹುಣಸೆ, ಬಿದಿರು, ಕಾಡು ಬಾದಾಮಿ, ಸಿಹಿ ಹುಣಸೆ, ಅರಳಿ, ಆಲ, ತಬಸಿ, ಬಸ್ಸಿ, ಬುಗುರಿ ಸೇರಿ ನಾನಾ ಕಾಡು ಜಾತಿ ಸಸಿಗಳನ್ನ ಆರೈಕೆ ಮಾಡಲಾಗಿದೆ.
ಪ್ರೋತ್ಸಾಹಧನ ವಿತರಣೆ: ರೈತರ ಜಮೀನುಗಳಲ್ಲಿ ಬೆಳೆಸಲು ಶ್ರೀಗಂಧ, ಹುಣಸೆ, ನೇರಳೆ, ಸೀತಾಫಲ, ರಕ್ತಚಂದನ, ಕರಿಬೇವು, ನುಗ್ಗೆ, ಬಿದಿರು ಬೆಳೆಸಲಾಗಿದೆ.
ಅರಣ್ಯ ಸುಧಾರಣೆಗೆಂದು ರೈತರಿಗೆ ರಿಯಾಯಿತಿ ದರದಲ್ಲಿ ಸಸಿ ವಿತರಿಸುವ ಗುರಿ ಇದೆ.
5-8 ಅಡಿ ಉದ್ದಗಲ ಸಸಿ ಸಾಕಾಣಿಕೆಗೆ ಪ್ರೋತ್ಸಾಹ ಧನ-6 ರೂ., 6-9 ಅಡಿ ಉದ್ದಗಲ-7 ರೂ., 8-12 ಅಡಿ ಉದ್ದಗಲ ಸಸಿ ಸಾಕಾಣಿಕೆಗೆ- 23 ರೂ. ನಂತೆ ಮೂರು ವರ್ಷಗಳ ಕಾಲ ಪ್ರೋತ್ಸಾಹ ಧನ ಕೊಡಲಾಗುವುದು.
ಆಸಕ್ತ ರೈತರು ಒಂದು ಎಕರೆಗೆ 400 ಸಸಿಯಂತೆ ಎಷ್ಟು ಬೇಕಾದರೂ ಕೊಂಡೊಯ್ಯಬಹುದು.
ಅರಣ್ಯ ಸಂಪತ್ತು ಸಮೃದ್ಧವಾಗಿ ಬೆಳೆದರೆ ಸಕಾಲಕ್ಕೆ ಮಳೆ ಬರಲಿದೆ. ಅಂತರ್ಜಲ ವೃದ್ಧಿಯಾಗಲಿದೆ. ಸಾಕು ಪ್ರಾಣಿ ಅಥವಾ ಕಾಡು ಪ್ರಾಣಿ, ಪಕ್ಷಿಗಳಿಗೂ ನೀರು, ಆಹಾರದ ಕೊರತೆ ನೀಗಲಿದೆ. ಹುಣಸೆ, ಮಾವು, ನೇರಳೆ ಇತ್ಯಾದಿ ಜನೋಪಯೋಗಿ ಮರಗಳನ್ನು ಜಮೀನುಗಳಲ್ಲಿ ಬೆಳೆಸಿದರೆ ನೂರಾರು ವರ್ಷಗಳ ಕಾಲ ಜೀವನಕ್ಕೆ ಆಸರೆಯಾಗಲಿವೆ. ನೆಡುತೋಪು ಮಾಡಲು ಮಳೆ ಎದುರು ನೋಡುತ್ತಿದ್ದೇವೆ.ಹಸನ್‌ಬಾಷಾ, ಪ್ರಭಾರ ವಲಯ ಅರಣ್ಯಾಧಿಕಾರಿ
ಉಲ್ವಲ ಯೋಜನೆಯಡಿ ಅಡುಗೆ ಸಿಲಿಂಡರ್ ವಿತರಣೆ ಪರಿಣಾಮ ಮರಗಳ ಕಡಿತಲೆ ಬಹಳಷ್ಟು ಕಡಿಮೆ ಆಗಿದೆ. ಜತೆಗೆ ಕಳೆದ 8-10 ವರ್ಷಗಳಲ್ಲಿ ಅರಣ್ಯೀಕರಣಕ್ಕೆ ಆದ್ಯತೆ ನೀಡಿದರ ಫಲ ನಮ್ಮೂರ ಕಾಡು ಅರೆ ಮಲೆನಾಡಂತೆ ಬೆಳೆಯಲಿದೆ.ಚಾಂದ್‌ಬಾಷಾ, ವನಪಾಲಕ