ಕೊಡಗಿನಲ್ಲಿ ಮಳೆ ಇಳಿಮುಖ

Rainfall in Kodagu
Published on

 ಮಡಿಕೇರಿ:

ಕೊಡಗಿನಲ್ಲಿ ಮಳೆಯ ಅಬ್ಬರ ಇಳಿದಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಬಹುತೇಕ ಕಡೆ ಸೋಮವಾರ ತುಂತುರು ಮಳೆಯಾಗಿದೆ. ನದಿಗಳಲ್ಲಿ ನೀರಿನ‌ ಮಟ್ಟ ಕಡಿಮೆ ಆಗುತ್ತಿದ್ದು ಪ್ರವಾಹದ ಆತಂಕ ದೂರವಾಗಿದೆ. ಕೆಲವು ಕಡೆಗಳಲ್ಲಿ ರಸ್ತೆಗೆ ಅಡ್ಡಲಾಗಿ ಮರ‌ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದ ಘಟನೆಗಳು ವರದಿಯಾಗಿದೆ. ನಂತರ ಮರ ತೆರವು‌ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. 

ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಸಹಜ ಸ್ಥಿತಿಗೆ ಬರುತ್ತಿದ್ದು, ನದಿಯಲ್ಲಿ ನೀರಿನ ಹರಿವು ಇಳಿಕೆಯಾಗಿದೆ. ಈ ಮಧ್ಯೆ ಇಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಪಾರ್ಕ್ ಬಹುತೇಕ ಹಾಳಾಗಿದೆ. ಗಿಡಗಳು ಕೊಳೆಯಲಾರಂಭಿಸಿದ್ದು, ನೀರಿನೊಳಗೆ ಮುಳುಗಿದ್ದ ವಿದ್ಯುತ್ ದೀಪಗಳ ಕತೆ ಏನಾಗಿದೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಈ ಪ್ರದೇಶ ಮಳೆಗಾಲದಲ್ಲಿ ಮುಳುಗುತ್ತದೆ ಎಂದು ಗೊತ್ತಿದ್ದರೂ ಪಾರ್ಕ್ ನಿರ್ಮಾಣದ ಹಿಂದಿನ ಕಾರಣವನ್ನು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

 ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 19.88 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 51.28 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ  1632.63 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 769.11 ಮಿ.ಮೀ ಮಳೆಯಾಗಿತ್ತು.                              

 ಮಡಿಕೇರಿ ತಾಲೂಕಿನಲ್ಲಿ 78 ಮಿ.ಮೀ.,  ವಿರಾಜಪೇಟೆ ತಾಲೂಕಿನಲ್ಲಿ 1.10 ಮಿ.ಮೀ.,  ಪೊನ್ನಂಪೇಟೆ ತಾಲೂಕಿನಲ್ಲಿ  20.93 ಮಿ.ಮೀ.,  ಸೋಮವಾರಪೇಟೆ ತಾಲೂಕಿನಲ್ಲಿ  60.80 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ  5.80 ಮಿ.ಮೀ. ಮಳೆಯಾಗಿದೆ. 

ಮಡಿಕೇರಿ ಕಸಬಾ 8.60, ನಾಪೋಕ್ಲು 5.80, ಸಂಪಾಜೆ 8.50, ಭಾಗಮಂಡಲ 20.20, ವಿರಾಜಪೇಟೆ 2.20, ಹುದಿಕೇರಿ 14.50, ಶ್ರೀಮಂಗಲ 32.20, ಪೊನ್ನಂಪೇಟೆ 21.01, ಬಾಳೆಲೆ 16.02, ಸೋಮವಾರಪೇಟೆ ಕಸಬಾ 55, ಶನಿವಾರಸಂತೆ 40, ಶಾಂತಳ್ಳಿ 100, ಕೊಡ್ಲಿಪೇಟೆ 48.20, ಕುಶಾಲನಗರ 2.60 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 9 ಮಿ.ಮೀ.ಮಳೆಯಾಗಿದೆ.  ಹಾರಂಗಿ ಜಲಾನಯನ ಪ್ರದೇಶದಲ್ಲೂ ಮಳೆಯ ಪ್ರಮಾಣ‌ ಕಡಿಮೆಯಾಗಿದ್ದು, ಜಲಾಶಯಕ್ಕೆ ಒಳಹರಿವು ಇಳಿಕೆ ಆಗಿದೆ.   2,859 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಸೋಮವಾರ 2855.25 ಅಡಿ ನೀರಿದೆ. 7281 ಕ್ಯೂಸೆಕ್ ಒಳಹರಿವು ಇದ್ದು,  ನದಿಗೆ 4000 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net