ಕೊಡಗಿನಲ್ಲಿ ಮಳೆ ಇಳಿಮುಖ

Rainfall in Kodagu
Published on

ಮಡಿಕೇರಿ:

ಜಿಲ್ಲೆಯಲ್ಲಿ ಪುಷ್ಯ ಮಳೆಯ ಅಬ್ಬರ ಸ್ವಲ್ಪ ಇಳಿದಂತೆ ಕಂಡು ಬರುತ್ತಿದೆ. ಶುಕ್ರವಾರ ರಾತ್ರಿಯ ತನಕವೂ ರಭಸದಿಂದ ಕೂಡಿದ್ದ ಮಳೆ ಶನಿವಾರ ಬೆಳಗ್ಗೆಯಿಂದ ಸ್ವಲ್ಪ ಶಾಂತವಾಗಿದೆ. ಇದರಿಂದಾಗಿ ಪ್ರವಾಹದ ಭೀತಿಯೂ ಕಡಿಮೆ ಆದಂತಾಗಿದೆ. ಅಲ್ಲಲ್ಲಿ ಸಾಧಾರಣ ಅಥವಾ ತುಂತುರು ಮಳೆ ಇತ್ತಾದರೂ ಆತಂಕದ ವಾತಾವರಣ ಎಲ್ಲಿಯೂ ಕಂಡುಬರಲಿಲ್ಲ.

ರಸ್ತೆಯ ಮೇಲೆ ನೀರು ಬಂದು ಜನಜೀವನ ಅಸ್ತವ್ಯಸ್ತವಾಗಿದ್ದ ಭಾಗಮಂಡಲದಲ್ಲಿ ಪ್ರವಾಹದ ನೀರಿನ ಮಟ್ಟ ನಿಧಾನಕ್ಕೆ ಇಳಿಕೆ ಆಗುತ್ತಿದೆ. ನಾಪೋಕ್ಲು, ಚೆರಿಯಪರಂಬು, ಸಿದ್ದಾಪುರ, ನೆಲ್ಲಿಹುದುಕೇರಿ, ಕುಶಾಲನಗರ ಭಾಗದಲ್ಲಿ ನದಿ ಪಾತ್ರದಲ್ಲಿ ವಾಸ ಮಾಡುತ್ತಿದ್ದವರು ಮಳೆ ಕಡಿಮೆಯಾದ ಕಾರಣ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿಜಲಾನಯನ ಪ್ರದೇಶದಲ್ಲೂ ಮಳೆ ಕಡಿಮೆಯಾಗಿದ್ದು, ಒಳಹರಿವಿನ ಪ್ರಮಾಣದಲ್ಲಿ ಇಳಿಕೆ ಕಂಡುಬAದಿದೆ. ಸಂಜೆ 5 ಗಂಟೆಯ ಮಾಹಿತಿ ಪ್ರಕಾರ 10 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ನದಿಗೆ 4 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ.

ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡAತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 55.95 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 36.86 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1404.47 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 674.02 ಮಿ.ಮೀ. ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ 65.82 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 31.35 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 50.65 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 96.55 ಮಿ.ಮೀ., ಹಾಗೂ ಕುಶಾಲನಗರ ತಾಲೂಕಿನಲ್ಲಿ 35.40 ಮಿ.ಮೀ. ಸರಾಸರಿ ಮಳೆಯಾಗಿದೆ.
ಮಡಿಕೇರಿ ಕಸಬಾ 59.60, ನಾಪೋಕ್ಲು 58.20, ಸಂಪಾಜೆ 61.50, ಭಾಗಮಂಡಲ 84, ವಿರಾಜಪೇಟೆ 31.20, ಅಮ್ಮತ್ತಿ 31.50, ಹುದಿಕೇರಿ 58.60, ಶ್ರೀಮಂಗಲ 95, ಪೊನ್ನಂಪೇಟೆ 24, ಬಾಳೆಲೆ 25, ಸೋಮವಾರಪೇಟೆ ಕಸಬಾ 82, ಶನಿವಾರಸಂತೆ 70, ಶಾಂತಳ್ಳಿ 184, ಕೊಡ್ಲಿಪೇಟೆ 50.20, ಕುಶಾಲನಗರ 19.80 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 51 ಮಿ.ಮೀ. ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net