ಮಂಗಳೂರು: ಕಳೆದ ಒಂದೆರಡು ದಿನಗಳಿಂದ ಕರಾವಳಿಯಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಶಕ್ರವಾರ ಅಲ್ಪ ಬಿಸಿಲು ಸಹಿತ ಅಲ್ಪ ಮಳೆಯ ಸಿಂಚನವಾಗಿದೆ. ಒಟ್ಟಾರೆಯಾಗಿ ಕರಾವಳಿತಾಧ್ಯಂತ ದಿನಪೂರ್ತಿ ಮೋಡ ಕವಿದ ವಾತಾವರಣ ಹೆಚ್ಚಾಗಿತ್ತು.
ಮಂಗಳೂರು ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಗುರುವಾರರಾತ್ರಿ ಹಲವು ಗಂಟೆಗಳ ಕಾಲ ಹನಿಮಳೆಯಾಗಿತ್ತು. ಶುಕ್ರವಾರ ಬೆಳಗ್ಗೆ ಜಿಲ್ಲೆಯ ಹಲವಡೆ ಮೋಡಕವಿದ ವಾತಾವರಣ ಕಂಡುವಂದಿದ್ದು, ಮನಂತರ ಅಲ್ಪ ಬಿಸಿಲು ಆವರಿಸಿತ್ತು. ಸುಳ್ಯ, ಕಡಬ ತಾಲೂಕಿನ ಹಲವೆಡೆ ದಿನಪೂರ್ತಿ ಬಿಸಿಲು ಸಹಿತ ಕೆಲವೊಮ್ಮೆ ಹನಿ ಮಳೆಯಾಗಿದೆ. ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಸುತ್ತಮುತ್ತ ಸಂಜೆ ವೇಳೆ ಸಾಧಾರಣ ಗುಡುಗು ಸಹಿತ ಮಳೆಯಾಗಿದೆ. ಪುತ್ತೂರು ಪೇಟೆಯಲ್ಲಿ ಹನಿ ಮಳೆಯಾದರೆ ಕೆಲವು ಕಡೆ ಸಿಡಿಲು ಸಹಿತ ಮಳೆಯಾಗಿದೆ.
*15ರಿಂದ ಮಳೆ ಪ್ರಮಾಣ ಹೆಚ್ಚಳ
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಶನಿವಾರ ಮಧ್ಯಾಹ್ನದ ನಂತರ, ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ದಿನದಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಸಂಜೆ, ರಾತ್ರಿ ಸಣ್ಣ ಪ್ರಮಾಣದ ಗುಡುಗು ಸಾಧ್ಯತೆಯೂ ಇದೆ. ಈಗಿನಂತೆ ದಿನದಲ್ಲಿ ಒಂದೆರಡು ಸಾಮಾನ್ಯ ಮಳೆ ಮುಂದುವರಿಯುವ ಸಾಧ್ಯತೆಗಳಿದ್ದು, ಆಗಸ್ಟ್ 15ರಿಂದ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಶುಕ್ರವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 8 ಮಿಮೀ ಮಳೆ ದಾಖಲಾಗಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ತುಸು ಹೆಚ್ಚಳವಾಗಿರುವುದರಿಂದ ಕಡಲತೀರ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಗರಿಷ್ಠ 35.9 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಶನಿವಾರ ವೇಳೆ ತುಸು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮಾಹಿತಿ ನೀಡಿದೆ.