

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಋತು ಸೋಮವಾರ ಕೊನೆಗೊಂಡಿದ್ದು, ಮಂಗಳವಾರದಿಂದ (ಅ.1) ಹಿಂಗಾರು ವರ್ಷಧಾರೆ ಆರಂಭವಾಗಲಿದೆ. ಹಿಂಗಾರು ಪ್ರಾರಂಭದಲ್ಲೇ ನಾಲ್ಕು ದಿನ ಭಾರಿ ವರ್ಷಧಾರೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡು ಪ್ರದೇಶ ವ್ಯಾಪ್ತಿಯಲ್ಲಿರುವ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಜತೆಗೆ ಬೆಂಗಳೂರು ಹಾಗೂ ಸುತ್ತಮುತ್ತಲಿರುವ ಎಲ್ಲ ಜಿಲ್ಲೆಗಳಲ್ಲೂ ಜೋರು ವರ್ಷಧಾರೆ ಆಗಲಿದೆ.
ಮುಂಗಾರು ಕೊನೆಗೊಂಡ ಹಿಂದಿನ 15 ದಿನಗಳಲ್ಲಿ ಬೆಂಗಳೂರು ಸುತ್ತಮುತ್ತ ಹೆಚ್ಚು ಮಳೆ ಸುರಿದಿರಲಿಲ್ಲ. ಆದರೆ, ಹಿಂಗಾರು ಋತುವಿನಲ್ಲಿ ವಿಜಯದಶಮಿ ಹಬ್ಬದವರೆಗೂ ಸಾಕಷ್ಟು ಮಳೆಯಾಗುವ ನಿರೀಕ್ಷೆ ಇದೆ.
ಮುಂಗಾರಿನಲ್ಲಿ ಶೇ.15 ಹೆಚ್ಚು ಮಳೆ:
ಪ್ರಸಕ್ತ ವರ್ಷದ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಸರಾಸರಿ ಶೇ.15 ಪ್ರಮಾಣದ ಹೆಚ್ಚು ಮಳೆಯಾಗಿದೆ. ಕರಾವಳಿಯಲ್ಲಿ ಶೇ.21, ಮಲೆನಾಡು-ಶೇ.13, ಉತ್ತರ ಒಳನಾಡು-ಶೇ.12 ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಶೇ.10 ವರ್ಷಧಾರೆ ಆಗಿದೆ.