ಕರಾವಳಿಯಲ್ಲಿ ಮುಂದುವರಿದ ವರ್ಷಧಾರೆ: ನಾಳೆಯಿಂದ ಒಳನಾಡು ಜಿಲ್ಲೆಗಳಲ್ಲಿ ಮಳೆ ಇಳಿಕೆ

bangalore rains
Published on

ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದು, ಬಿತ್ತನೆ ಮಾಡಿದ್ದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಜತೆಗೆ ಹೆಚ್ಚಿನ ಜಲಾಶಯಗಳಿಂದ ನೀರು ಹೊರಬಿಟ್ಟಿರುವ ಕಾರಣ ನದಿ ಪಾತ್ರದ ಹಳ್ಳಿಗಳ್ಳಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

ಮಂಗಳವಾರವೂ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಿತು. ಈ ವಾರಾಂತ್ಯದವರೆಗೂ ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ವರ್ಷಧಾರೆ ಮುಂದುವರಿಯಲಿದೆ. ಈ ಮಧ್ಯೆ ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಹಲವೆಡೆ ಬಿರುಸಿನ ಮಳೆಯಾಗಿದೆ. ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದ ವರ್ಷಧಾರೆ ಆಗಿದ್ದು, ಕೆಲ ಸ್ಥಳಗಳಲ್ಲಿ ಮಾತ್ರ ಹೆಚ್ಚಿನ ಪ್ರಮಾಣದ ಮಳೆ ಸುರಿದಿದೆ.

ಬುಧವಾರದಿಂದ ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆ ಪ್ರಮಾಣದ ಕಡಿಮೆಯಾಗಲಿದೆ. ಮಲೆನಾಡು ಹೊರತುಪಡಿಸಿ ಇನ್ನುಳಿದೆಡೆ ಸಾಧಾರಣ ಪ್ರಮಾಣದ ವರ್ಷಧಾರೆ ಆಗಲಿದೆ. ಸತತ ಮಳೆಯಿಂದಾಗಿ ಹಲವೆಡೆ ಉಷ್ಣಾಂಶದಲ್ಲಿ ಕುಸಿತ ಕಂಡಿದೆ. ಮಲೆನಾಡು ಸೇರಿ ಬೆಂಗಳೂರು, ಬೆಳಗಾವಿಯಲ್ಲಿ ಥಂಡಿ ವಾತಾವರಣ ಕಂಡುಬಂದಿದೆ.

ಜಲಾಶಯಗಳು ಭರ್ತಿ:

ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ರಾಜ್ಯದ ಪ್ರಮುಖ ಜಲಾಶಯಗಳಿಗೆ ಹೆಚ್ಚಿನ ನೀರು ಹರಿದುಬರುತ್ತಿದೆ. ಕೆಆರ್‌ಎಸ್, ಭದ್ರಾ ಡ್ಯಾಂ, ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯ ಕೂಡ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.

ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿರುವ ಕೊಯ್ನ ಜಲಾಶಯ ಭರ್ತಿಯಾಗಿದ್ದು, ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಇದರ ಪರಿಣಾಮ ಕರ್ನಾಟಕದ ಗಡಿ ಭಾಗದಲ್ಲಿ ಕೃಷ್ಣಾ ಹಾಗೂ ಘಟಪ್ರಭಾ ನದಿಗಳಗುಂಟ ಪ್ರವಾಹದ ಸ್ಥಿತಿ ಉಂಟಾಗಿದೆ. ನದಿ ತಟದಲ್ಲಿರುವ ಗ್ರಾಮಸ್ಥರು ಎಚ್ಚರ ವಹಿಸುವಂತೆ ಸ್ಥಳೀಯ ಜಿಲ್ಲಾಡಳಿತ ಎಚ್ಚರಿಕೆ ರವಾನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net