ರಾಜ್ಯಾದ್ಯಂತ ಮಳೆ ಚುರುಕು:3 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್

rain
Published on

ಬೆಂಗಳೂರು:ರಾಜ್ಯಾದ್ಯಂತ ಮಳೆ ಚುರುಕುಗೊಂಡಿದೆ. ಶಿವಮೊಗ್ಗದ ಆಗುಂಬೆ, ಚಿಕ್ಕಮಗಳೂರಿನ ಮೂಡಗೆರೆ, ದಣ ಕನ್ನಡದ ಮಂಗಳೂರು, ಹೊನ್ನಾವರ ಹಾಗೂ ಕಲಬುರಗಿ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೋಮವಾರ ಭಾರಿ ಪ್ರಮಾಣದಲ್ಲಿ ವರ್ಷಧಾರೆಯಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜು.9ರಂದು ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್​ ಅರ್ಲಟ್​ ಘೋಷಿಸಿದೆ. ಈ ವೇಳೆ 204 ಮಿಮೀ ವರೆಗೆ ಮಳೆ ಬೀಳುವ ಸಾಧ್ಯತೆ ಇದೆ. ಜು.10ರಿಂದ ಮುಂದಿನ ಮೂರು ದಿನ ಮೇಲಿನ ಜಿಲ್ಲೆಗಳಲ್ಲಿ ಆರೆಂಜ್​ ಅರ್ಲಟ್​ ನೀಡಲಾಗಿದೆ. ಪ್ರತಿ ಗಂಟೆಗೆ 55 ಕಿ.ಮೀ.ವೇಗದಲ್ಲಿ ಬೀಸುವ ಬಿರುಗಾಳಿ ಕರಾವಳಿಯ ಉದ್ದಕ್ಕೂ ಮತ್ತು ಹೊರಗೆ ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ದಣ ಕನ್ನಡದ ಮೂಲ್ಕಿಯಿಂದ ಮಂಗಳೂರಿನವರೆಗೆ, ಉತ್ತರ ಕನ್ನಡದ ಮಾಜಾಳಿಯಿಂದ ಭಟ್ಕಳವರೆಗೆ, ಉಡುಪಿಯ ಬೈಂದೂರಿನ ಕಾಪುವರೆಗೆ ಹೈ ವೇವ್​ ವಾಚ್​ ಅರ್ಲಟ್​ ನೀಡಲಾಗಿದೆ. ಸಮುದ್ರದಲ್ಲಿ 3 ಮೀಟರ್​ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಏಳಲಿವೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಸಮುದ್ರ ದಡದ ಬಳಿ ಪ್ರವಾಸಿಗರು ತೆರಳದಂತೆ ಇಲಾಖೆ ಎಚ್ಚರಿಕೆ ಕೊಟ್ಟಿದೆ.

ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮುಂದಿನ ಎರಡು ದಿನ ಧಾರಾಕಾರವಾಗಿ ಮಳೆ ಬೀಳುವ ಹಿನ್ನೆಲೆಯಲ್ಲಿ ಆರೆಂಜ್​ ಅರ್ಲಟ್​ ನೀಡಲಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದರ್​, ಕಲಬುರಗಿ, ಯಾದಗಿರಿಯಲ್ಲಿ ಜು.9ರಂದು ಮತ್ತು ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರದಲ್ಲಿ ಜು.10ರಂದು ಯೆಲ್ಲೋ ಅರ್ಲಟ್​ ನೀಡಲಾಗಿದೆ. ದಕ್ಷಿಣ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ. ಕೆಲ ಜಿಲ್ಲೆಗಳಲ್ಲಿ ಬಿರುಗಾಳಿ ಜಾಸ್ತಿ ಇರಲಿದ್ದು, ಸಾರ್ವಜನಿಕರು ಎಚ್ಚರಿಕೆವಹಿಸುವಂತೆ ಇಲಾಖೆ ಸಲಹೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net