

ಬೆಳಗಾವಿ: ಪ್ರಸಕ್ತ ವರ್ಷದಲ್ಲಿ ಮಳೆ ಕಣ್ಣುಮುಚ್ಚಾಲೆ ಆಡುತ್ತಿದ್ದರೆ ಇತ್ತ ಬಿತ್ತನೆ ಮಾಡಿದ ರೈತರು ಮೊಳಕೆಯೊಡೆದು ಎಲೆಯುಟ್ಟು ನಿಂತ ಬೆಳೆ ಉಳಿಸಿಕೊಳ್ಳಲು ಹರಸಾಹಸಪಡುವಂತಾಗಿದೆ. ಮಳೆ ಅಭಾವ ಹೀಗೇ ಮುಂದುವರಿದರೆ ರೈತರ ಕಷ್ಟ ಇಮ್ಮಡಿಯಾಗಲಿದೆ.
ಜಿಲ್ಲೆಯಲ್ಲಿ ಮಳೆ ಮಾಯವಾಗಿದ್ದು ಬೇಸಿಗೆಯ ಛಾಯೆ ಆವರಿಸಿದೆ. ಆರಂಭದಲ್ಲಿ ಅಬ್ಬರಿಸಿದ್ದ ಮಳೆರಾಯ ಈಗ ತಣ್ಣಗಾಗಿದ್ದರಿಂದ ಕಷ್ಟಪಟ್ಟು ಬಿತ್ತನೆ ಮಾಡಿದ ರೈತರಿಗೆ ಬೆಳೆ ಹಾಳಾಗುವ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಜೂನ್‌ನಿಂದ ಆಗಸ್ಟ್ 17ರ ವರೆಗೆ 432 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 386 ಮಿ.ಮೀ ಮಾತ್ರ ಮಳೆಯಾಗಿದೆ. ಪರಿಣಾಮ ಶೇ.46 ಮಳೆ ಕೊರತೆಯಾಗಿದ್ದು, ಜಿಲ್ಲೆಯ ರೈತರನ್ನು ಚಿಂತೆಗೀಡು ಮಾಡಿದೆ. ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ 7.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಗುರಿ ಹಾಕಿಕೊಂಡಿತು.
ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ. ಗುರಿಯ ಪೈಕಿ 6.19 ಲಕ್ಷ ಹೆಕ್ಟೇರ್ (ಶೇ.87) ನಷ್ಟು ಬಿತ್ತನೆಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 2.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. 85 ಸಾವಿರ ಹೆಕ್ಟೇರ್‌ನಲ್ಲಿ ಸುಯೆಬಾನ್, 1.11 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. 60 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ. ಇವು ಪ್ರಮುಖ ಬೆಳೆಗಳಾಗಿವೆ. ಅವುಗಳಲ್ಲದೆ ಇತರ ಸಣ್ಣಪುಟ್ಟ ಬೆಳೆಗಳನ್ನು ಬೆಳೆಯಲಾಗಿದೆ. ಮಳೆ ಅಭಾವದಿಂದಾಗಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿ ಬೆಳೆಗಳು ಹಾಳಾಗುತ್ತಿವೆ. ಮಳೆ ಕೊರತೆ, ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದು ತೋಟಗಾರಿಕೆ ಬೆಳೆ ಮೇಲೂ ಪರಿಣಾಮ ಬೀರಿದೆ.
ಆ.22, 23, 26, 27 ರಂದು ಮಳೆ?: ಬಿತ್ತಿದ ಬೆಳೆಗಳು ಅಲ್ಪಸ್ವಲ್ಪ ಜೀವ ಹಿಡಿದುಕೊಂಡಿವೆ. ಇನ್ನೊಂದು ವಾರ, 10 ದಿನ ಮಳೆ ಕೈಕೊಟ್ಟರೆ ಬೆಳೆ ನೆಲ ಕಚ್ಚಲಿವೆ. ಆದರೆ, ಹವಾಮಾನ ಇಲಾಖೆ ವರದಿ ಪ್ರಕಾರ ಆ. 22, 23, 26, 27 ರಂದು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿದೆ ಎಂಬ ಮಾಹಿತಿ ಬಂದಿದ್ದು, ಇದೊಂದು ಆಶಾಭಾವವನ್ನು ರೈತರು ಇಟ್ಟುಕೊಂಡಿದ್ದಾರೆ. ಅದೇನೇ ಇರಲಿ ಮಳೆ ಆಗಲಿ ಎನ್ನುವುದು ಅನ್ನದಾತನ ಜಪವಾಗಿದೆ.
ರಾಜ್ಯ ಸರ್ಕಾರ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ ಎನ್ನುತ್ತಿದೆ. ಆದರೆ, ರೈತರ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಲೋಡ್‌ಶೆಡ್ಡಿಂಗ್ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯೊಂದರಲ್ಲಿ 3,64,394 ಪಂಪ್‌ಸೆಟ್‌ಗಳಿವೆ. ಜಿಲ್ಲೆಗೆ 800 ಮೆಗಾ ವ್ಯಾಟ್ ವಿದ್ಯುತ್ ಬೇಕು. ಪ್ರಸ್ತುತ 700 ಮೆಗಾ ವ್ಯಾಟ್ ವಿದ್ಯುತ್ ಪೂರೈಕೆಯಾಗುತ್ತಿದೆ. 100 ಮೆಗಾ ವ್ಯಾಟ್ ವಿದ್ಯುತ್ ಕೊರತೆ ಇದ್ದು, ಈ ಕೊರತೆ ಸರಿಪಡಿಸಲು ಹಗಲು 4 ಗಂಟೆ ಮತ್ತು ರಾತ್ರಿ 3 ಗಂಟೆ ವಿದ್ಯುತ್ ನೀಡುತ್ತಿದ್ದಾರೆ. ಆದರೆ ನಿರಂತವಾಗಿ ಕೊಡದೇ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ಜಿಲ್ಲೆಯಲ್ಲಿ 146 ಎಂ.ಎಂ. ಆಗಬೇಕಿತ್ತು 116 ಎಂ.ಎಂ. ಮಳೆ ಆಗಿದ್ದು, ಶೇ. 21ರಷ್ಟು ಮಳೆ ಕೊರತೆಯಾಗಿತ್ತು. ಜುಲೈನಲ್ಲಿ 191 ಎಂ.ಎಂ. ಮಳೆ ಆಗಬೇಕಿತ್ತ. 269 ಎಂ.ಎಂ. ಮಳೆ ಆಗಿ ಶೇ. 41 ಎಂ.ಎಂ. ಮಳೆ ಹೆಚ್ಚಾಗಿತ್ತು. ಆ.17ರ ವರೆಗೆ 98 ಎಂ.ಎಂ. ಮಳೆ ಆಗಬೇಕಿತ್ತು. 157 ಎಂ.ಎಂ. ಮಳೆ ಆಗಿದೆ. ಶೇ. 24 ಎಂ.ಎಂ. ಮಳೆ ಹೆಚ್ಚಾಗಿತ್ತು. ಆದರೆ, ಈ ವರ್ಷ 2023ರ ಜೂನ್‌ನಲ್ಲಿ 146 ಎಂ.ಎಂ. ಮಳೆ ಆಗಬೇಕಿತ್ತು ಕೇವಲ 48 ಎಂ.ಎಂ. ಮಳೆ ಆಗಿದ್ದು, ಶೇ.67 ಎಂ.ಎಂ. ಮಳೆ ಕೊರತೆಯಾಗಿದೆ. ಜುಲೈನಲ್ಲಿ 191 ಎಂ.ಎಂ. ಮಳೆ ಆಗಬೇಕಿತ್ತು. 306 ಎಂ.ಎಂ. ಮಳೆ ಆಗಿದ್ದು, ಶೇ. 61ರಷ್ಟು ಹೆಚ್ಚಾಗಿದೆ. ಆ.17ರವರೆಗೆ 94 ಎಂ.ಎಂ. ಮಳೆ ಆಗಬೇಕಿತ್ತು. 33 ಎಂ.ಎಂ. ಮಳೆ ಆಗಿದೆ. ಶೇ. 66 ಎಂ.ಎಂ. ಮಳೆ ಕೊರತೆಯಾಗಿದೆ. ಒಟ್ಟಾರೆ ಜೂನ್‌ನಿಂದ ಅಗಸ್ಟ್‌ವರೆಗೆ 432 ಎಂ.ಎಂ. ಆಗಬೇಕಿತ್ತು. 386 ಎಂ.ಎಂ. ಮಳೆ ಆಗಿದ್ದು, ಶೇ. 46 ಮಳೆ ಕೊರತೆಯಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ 6.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಆ. 22, 23, 26, 27ರಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ. ರೈತರು ಆಶಾಭಾವದಿಂದ ಇರಬೇಕು. ಧೃತಿಗೆಡಬಾರದು.| ಶಿವನಗೌಡ ಪಾಟೀಲ ಕೃಷಿ ಇಲಾಖೆ ಜಂಟಿ ನಿರ್ದೇಶಕ ಬೆಳಗಾವಿ
| ಜಗದೀಶ ಹೊಂಬಳಿ ಬೆಳಗಾವಿ