ಮಾಯಕೊಂಡದಲ್ಲಿ ಮಳೆ, ಗಾಳಿ ಆರ್ಭಟಕ್ಕೆ ತೋಟಗಾರಿಕಾ ಬೆಳೆಗಳಿಗೆ ಹಾನಿ

myk 1
Published on

ಮಾಯಕೊಂಡ: ಭಾನುವಾರ ಸಂಜೆ ಸುರಿದ ಮಳೆ, ಗಾಳಿಗೆ ದಾವಣಗೆರೆ ತಾಲೂಕಿನ ಆನಗೋಡು ಹೋಬಳಿಯ ಕುರುಡಿ, ಕಿತ್ತೂರು, ಹೆಮ್ಮನಬೇತೂರು, ಚಿಕ್ಕವನಾಗ್ತಿಹಳ್ಳಿ ಸೇರಿ ಇನ್ನು ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದ ತೋಟಗಾರಿಕಾ ಬೆಳೆಗಳ ಹಾನಿಯಾಗಿದೆ. ಕಟಾವಿಗೆ ಬಂದಿದ್ದ ಪಪ್ಪಾಯ, ಬಾಳೆ ನೆಲಕ್ಕುರುಳಿ ಲಕ್ಷಾಂತರ ರೂಪಾಯಿ ನಷ್ಟವಾಗಿರುವುದರಿಂದ ರೈತರು ಕಂಗಾಲಾಗಿ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ಬಂದಿದೆ.

ಕುರುಡಿ ಗ್ರಾಮದ ರೈತ ರುದ್ರಪ್ಪ 3 ಎಕರೆ ಅಡಕೆ ಗಿಡಗಳ ಮಧ್ಯ ಅಂತರ ಬೆಳೆಯಾಗಿ ಬೆಳೆದಿದ್ದ ಪಪ್ಪಾಯ ಗಿಡಗಳು ಫಸಲಿಗೆ ಬಂದಿದ್ದು ಗಾಳಿ, ಮಳೆ ರಭಸಕ್ಕೆ ನೆಲಕಚ್ಚಿವೆ. ಹೆಮ್ಮನಬೇತೂರು ಗ್ರಾಮದ ರೈತ ರುದ್ರೇಶ್ ಸಹ ಅಂತರ ಬೆಳೆಯಾಗಿ ಬೆಳೆದ ಕಟಾವಿಗೆ ಬಂದಿದ್ದ ಬಾಳೆ ಉರುಳಿ ಬಿದ್ದಿವೆ.

ಅಧಿಕಾರಿಗಳ ಭೇಟಿ

ವಿಷಯ ತಿಳಿದು ಸೋಮವಾರ ಬೆಳಗ್ಗೆ ಶಾಸಕ ಕೆ.ಎಸ್. ಬಸವಂತಪ್ಪ ಕುರುಡಿ, ಕಿತ್ತೂರು, ಹೆಮ್ಮನಬೇತೂರು, ಚಿಕ್ಕವ್ವನಾಗ್ತಿಹಳ್ಳಿ ಗ್ರಾಮಗಳ ರೈತರ ತೋಟಗಳಿಗೆ ಭೇಟಿ ನೀಡಿ ಬೆಳೆ ನಷ್ಟ ಆಗಿರುವುದನ್ನು ವೀಕ್ಷಣೆ ಮಾಡಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಿದರು. ನಂತರ ರೈತರೊಂದಿಗೆ ಮಾತನಾಡಿ, ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಪ್ರಕೃತಿ ವಿಕೋಪದಡಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕಿ ರೇಷ್ಮಾ ಪರ್ವೀನ್, ಕಂದಾಯ ಇಲಾಖೆಯ ಉಪ ರಾಜಸ್ವ ನಿರೀಕ್ಷಕ ಎನ್.ಎಸ್. ಚಂದ್ರಪ್ಪ ಅಮಿತ್, ಕೃಷಿ ಅಧಿಕಾರಿ ಶ್ರೀನಿವಾಸ್, ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ. ಚಂದ್ರಣ್ಣ, ತಾಪಂ ಮಾಜಿ ಸದಸ್ಯರಾದ ಶಂಬಣ್ಣ, ಪ್ರಕಾಶ್, ರೇವಣಸಿದ್ದಯ್ಯ ಹಾಗೂ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net