

ವಿಜಯಪುರ: ಕಳೆದೊಂದು ತಿಂಗಳಿನಿಂದ ರಣಬಿಸಿಲಿಗೆ ಕಾದ ಕಾವಲಿಯಂತಾಗಿದ್ದ ನೆಲ, ಬಸವಳಿದ ಜನ& ಜಾನುವಾರುವಿಗೆ ಗುರುವಾರ ಮಳೆರಾಯ ತಂಪೆರೆದಿದ್ದು ಒಂದೆಡೆ ಸಮಾಧಾನ ತಂದಿದ್ದರೆ ಇನ್ನೊಂದೆಡೆ ಬರಸಿಡಿಲಿಗೆ ಜೀವ ಹಾನಿಯಾಗಿದ್ದು ದು:ಖಕ್ಕೆಡೆ ಮಾಡಿತು.
ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಧಗೆಯ ವಾತಾವರಣವಿತ್ತು. ಮಧ್ಯಾಹ್ನ ಮೋಡ ಕವಿದ ವಾತಾವರಣ ಮಳೆಯ ಮುನ್ಸೂಚನೆ ನೀಡಿತು. ಸಂಜೆಯಾಗುತ್ತಿದ್ದಂತೆ ಆಗಸದಲ್ಲಿ ಹರಡಿಕೊಂಡ ಕಾಮೋರ್ಡ ಕರಗಿ ನೀರಾಯಿತು. ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ವರುಣನ ಸಿಂಚನವಾಯಿತು.
ತಿಕೋಟಾ ಪಟ್ಟಣ ಸೇರಿದಂತೆ ತಾಲೂಕಿನ ಘೋಣಸಗಿ, ಬಾಬಾನಗರ, ಹುಬನೂರ, ಸೋಮದೇವರಹಟ್ಟಿ, ಬಿಜ್ಜರಗಿ, ಕಳ್ಳಕವಟಗಿ ಸುತ್ತ ಮುತ್ತ ಗ್ರಾಮಗಳಲ್ಲಿ ಗಾಳಿ ಸಹಿತ ಜಿಟಿಜಿಟಿ ಮಳೆ ಸುರಿಯಿತು.
ಸಿಂದಗಿಯಲ್ಲಿ ಕಳೆದ ಶಿವರಾತ್ರಿಯಿಂದಲೂ ಜನರು ಸುಡುವ ಸೂರ್ಯನ ಪ್ರಖರತೆಗೆ ಅಬ್ಬಾ ಬಿಸಿಲು ಎನ್ನುತ್ತ ಬಸವಳಿಯುತ್ತ, ಸುಡುವ ಸೂರ್ಯನಿಗೆ ಹಿಡಿಶಾಪ ಹಾಕುತ್ತಿದ್ದರು. ಗುರುವಾರ ಮೋಡದ ನಡುವೆ ಮರೆಯಾದ ಸೂರ್ಯನ ಸುಡುಕೋಪ ಸ್ವಲ್ಪ ತಣ್ಣಗಾಗಿತ್ತು.
ಬಿಸಿಲಿನ ಝಳಕ್ಕೆ ಬೇಸತ್ತು ವರುಣನ ಆಗಮನದ ನಿರೀೆಯಲ್ಲಿದ್ದ ಜನರಿಗೆ ವರುಣನ ಕೃಪೆಯಾಯಿತು. ಹತ್ತಾರು ನಿಮಿಷ ಗುಡುಗು, ಬಿರುಸಾದ ಗಾಳಿಯ ಜತೆಗೆ ಬಂದ ಮಳೆ, ಕಾದ ರಸ್ತೆಗಳ ಜತೆಗೆ ಬೆವರಿನ ದೇಹಗಳನ್ನು ತಂಪಾಗಿಸಿತು. ನಿಡಗುಂದಿಯಲ್ಲಿ ಅರ್ಧಗಂಟೆಗೂ ಅಧಿಕ ಕಾಲ ಮಳೆ ಸುರಿಯಿತು. ಗೊಳಸಂಗಿ, ನಾಲತವಾಡ, ಬಬಲೇಶ್ವರ ಹೀಗೆ ಮುಂತಾದ ಭಾಗಗಳಲ್ಲಿ ಮಳೆ ಸುರಿದು ನೆಲ ತಂಪಾಗಿಸಿತು.
ಸಿಡಿಲಿಗೆ ಬಲಿ : ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಕೃಷಿ ಕಾರ್ಯದಲ್ಲಿ ತಲ್ಲೀನವಾಗಿದ್ದ ಅನ್ನದಾತನೋರ್ವ ಸಿಡಿಲಿನ ಹೊಡೆತಕ್ಕೆ ಅಸುನೀಗಿದ್ದಾನೆ. ಗ್ರಾಮದ ಸೋಮಶೇಖರ ಕಾಶಿನಾಥ ಪಟ್ಟಣಶೆಟ್ಟಿ (43) ಜೀವ ತೆತ್ತಿದ್ದಾರೆ. ಕುಟುಂಬಸ್ಥರೊಂದಿಗೆ ಜಮೀನಿನಲ್ಲಿ ಕೆಲಸ ಮಾಡುವಾಗ ಏಕಾಏಕಿ ಸಿಡಿಲು ಬಡೆದಿದೆ. ಕೂಡಲೇ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿಯೇ ಸೋಮಶೇಖರ ಅಸುನೀಗಿದ್ದಾರೆ. ಇವರೊಂದಿಗಿದ್ದ ಇಬ್ಬರು ಹೆಣ್ಣು ಮಕ್ಕಳಿಗೆ ಸಿಡಿಲಿನ ಶಾಖ ತಟ್ಟಿದೆ. ಮೃತ ಸೋಮಶೇಖರಗೆ ಮಡದಿ ಹಾಗೂ ಇಬ್ಬರು ಪುತ್ರಿಯರು ಮತ್ತು ಬಂಧು-& ಬಳಗ ಇದ್ದಾರೆ.