ಮಳೆ-ಗಾಳಿಯಿಂದ ಬೆಳೆ, ಮನೆಗೆ ಹಾನಿ ದಾವಣಗೆರೆ ಜಿಲ್ಲೆಯಲ್ಲಿ 21.92 ಲಕ್ಷ ರೂ. ನಷ್ಟ ಅಂದಾಜು

dvg banana apr 19
Published on

ದಾವಣಗೆರೆ: ಜಿಲ್ಲೆಯಲ್ಲಿ ಶನಿವಾರ ಸಂಜೆ ಸುರಿದ ಗಾಳಿ ಸಹಿತ ಮಳೆಯಿಂದ 21.92 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ. ಭತ್ತ, ಅಡಕೆ, ಬಾಳೆ, ಪಪ್ಪಾಯ ಬೆಳೆಗಳು ಹಾನಿಗೀಡಾಗಿವೆ. ಹಲವು ಮನೆಗಳು ಭಾಗಶಃ ಕುಸಿದಿವೆ. ಅಲ್ಲಲ್ಲಿ ಮರ, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಜಿಲ್ಲೆಯಲ್ಲಿ 55 ಮನೆಗಳು ಭಾಗಶಃ ಹಾನಿಗೀಡಾಗಿವೆ. 6.24 ಎಕರೆ ಬಾಳೆ, 3.05 ಎಕರೆ ಅಡಕೆ ಸೇರಿ 9.29 ಎಕರೆ ಬೆಳೆ ಹಾನಿಯಾಗಿದ್ದು, ಅಂದಾಜು 6.80 ಲಕ್ಷ ರೂ. ನಷ್ಟ ಸಂಭವಿಸಿದೆ.

ಮೂರು ಎಕರೆಯಲ್ಲಿ ಬಾಳೆ ಬೆಳೆದಿದ್ದು, ಸಂಜೆ ಬೀಸಿದ ಗಾಳಿಯಿಂದ ಬಾಳೆ ಗಿಡಗಳು ತುಂಡಾಗಿವೆ. ಕೆಲವು ಬೇರು ಸಹಿತ ಬಿದ್ದಿವೆ. ಬಾಳೆ ಗೊನೆ ಬಿಟ್ಟಿದ್ದವು. 1-2 ತಿಂಗಳಲ್ಲಿ ಕಟಾವು ಮಾಡಬೇಕಿತ್ತು. ಇದರಿಂದ ನಮಗೆ ಹಾನಿಯಾಗಿದೆ ಎಂದು ಓಬಣ್ಣನಹಳ್ಳಿಯ ರೈತ ಒ.ಡಿ. ಸದಾಶಿವಪ್ಪ ತಿಳಿಸಿದರು.

ಹರಿಹರ ತಾಲೂಕಿನಲ್ಲಿ 21 ಪಕ್ಕಾ ಮನೆ, 2 ಕಚ್ಚಾ ಮನೆ ಭಾಗಶಃ ಹಾನಿಗೀಡಾಗಿದ್ದು, 1.17 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ.

60 ಎಕರೆ ಭತ್ತ, 23 ಎಕರೆ ಅಡಕೆ, 5 ಎಕರೆ ಪಪ್ಪಾಯ ಸೇರಿ ಒಟ್ಟು 88 ಎಕರೆ ಬೆಳೆ ಹಾನಿಯಾಗಿದ್ದು ಅಂದಾಜು 8 ಲಕ್ಷ ರೂ. ನಷ್ಟವಾಗಿದೆ.

ಚನ್ನಗಿರಿ ತಾಲೂಕಿನಲ್ಲಿ 5 ಪಕ್ಕಾ ಮನೆಗಳು ಭಾಗಶಃ ಹಾನಿಯಾಗಿದ್ದು, 1 ಲಕ್ಷ ರೂ. ಅಂದಾಜು ನಷ್ಟವಾಗಿದೆ. 7 ಎಕರೆ ಅಡಕೆ ಬೆಳೆ ಹಾನಿಯಾಗಿದ್ದು, ಅಂದಾಜು 3.80 ಲಕ್ಷ ರೂ. ನಷ್ಟ ಸಂಭವಿಸಿದೆ.

ನ್ಯಾಮತಿ ತಾಲೂಕಿನಲ್ಲಿ 3 ಪಕ್ಕಾ, 2 ಕಚ್ಚಾ ಮನೆಗಳು ಭಾಗಶಃ ಹಾನಿಯಾಗಿದ್ದು, ಅಂದಾಜು 1.15 ಲಕ್ಷ ರೂ. ನಷ್ಟವಾಗಿದೆ.

ಜಿಲ್ಲೆಯಲ್ಲಿ ಶನಿವಾರ 2.56 ಮಿ.ಮೀ. ಸರಾಸರಿ ಮಳೆಯಾಗಿದೆ. ದಾವಣಗೆರೆ 1.24 ಮಿ.ಮೀ, ಹರಿಹರ 0.95 ಮಿ.ಮೀ., ಹೊನ್ನಾಳಿ 8.07 ಮಿ.ಮೀ., ಚನ್ನಗಿರಿ 2.58 ಮಿ.ಮೀ. ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net