

ಲಕ್ಷ್ಮೇಶ್ವರ: ರೋಹಿಣಿ ಮಳೆ ಕೈಕೊಟ್ಟಿದ್ದರಿಂದ ಕಂಗಾಲಾಗಿದ್ದ ರೈತ ಸಮುದಾಯಕ್ಕೆ ಬುಧವಾರ ಕಾರಹುಣ್ಣಿಮೆ ಸಂಭ್ರಮದ ಜತೆಗೆ ಅಬ್ಬರಿಸಿದ ಮೃಗಶಿರ ಮಳೆ ರೈತರ ಮೊಗದಲ್ಲಿ ಕಳೆ ತಂದಿದೆ.
ಪಟ್ಟಣ ಸೇರಿ ತಾಲೂಕಿನಾದ್ಯಂತ ಮಳೆಯಾಗಿದೆ. ರೋಹಿಣಿ ಮಳೆಯಾಗುತ್ತದೆ ಎಂಬ ಆಶಾಭಾವನೆಯಿಂದ ತಾಲೂಕಿನಾದ್ಯಂತ ಶೇ. 50ರಷ್ಟು ರೈತರು ಹೆಸರು, ಶೇಂಗಾ, ಹತ್ತಿ, ಉಳ್ಳಾಗಡ್ಡಿ ಬಿತ್ತನೆ ಮಾಡಿದ್ದರು. ಮಳೆಯಾಗದ್ದರಿಂದ ಬಿತ್ತಿದ ಬೀಜಗಳು ಇಲಿ-ಹೆಗ್ಗಣಗಳ ಪಾಲಾಗುತ್ತಿದ್ದು ರೈತರು ಚಿಂತೆಗೀಡಾಗಿದ್ದರು. ಮಳೆಗಾಗಿ ನಿತ್ಯ ಬಾನತ್ತ ಚಿತ್ತ ಹರಿಸಿದ್ದ ರೈತ ಸಮುದಾಯದಲ್ಲಿ ಮಂದಹಾಸ ಮೂಡಿದೆ.
ಮಳೆಯಿಂದ ಚರಂಡಿಗಳು ತುಂಬಿ ನೀರು ರಸ್ತೆ ಮೇಲೆ ಹರಿದು ಸಂಚಾರ ಅಸ್ತವ್ಯಸ್ಥಗೊಂಡಿತು. ಪಟ್ಟಣದ ಕುಂಬಾರ ಓಣಿ, ಬೆಣ್ಣಿಪೇಟೆ, ಬಸವೇಶ್ವರ ನಗರ, ಜನ್ನತನಗರ, ಮುಕ್ತಿನಗರ ಮತ್ತಿತರೆಡೆ ಮನೆಗಳಿಗೆ ನೀರು ನುಗ್ಗಿದೆ. ಮುಖ್ಯ ಬಜಾರ್ ರಸ್ತೆ, ಹಾವಳಿ ಆಂಜನೇಯ ದೇವಸ್ಥಾನದ ಸರ್ಕಲ್‌ನಲ್ಲಿ ಸಂಗ್ರಹಗೊಂಡ ಅಪಾರ ಪ್ರಮಾಣ ಕೊಳಚೆ ನೀರಿನಿಂದ ವಾಹನ ಸವಾರರು ಪರದಾಡಿದರು. ಹೊಸ ಬಸ್ ನಿಲ್ದಾಣದಿಂದ ಗದಗ ಅಗಸಿವರೆಗೂ ಚರಂಡಿ ನೀರು ಅಪಾರ ಪ್ರಮಾಣದಲ್ಲಿ ಸೋಮೇಶ್ವರ ದ್ವಾರದ ಹತ್ತಿರ ಸಂಗ್ರಹಗೊಂಡು ಗದಗ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಹಳ್ಳ-ಕೊಳ್ಳಗಳು ತುಂಬಿ ಹರಿದು ಗ್ರಾಮೀಣ ಭಾಗದ ರಸ್ತೆಗಳ ಸಂಚಾರ ಗಂಟೆಗಳ ಕಾಲ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು. ಜೋರಾದ ಗಾಳಿ-ಮಳೆಯಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಮಳೆಯಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.