ರಾಗಿ ಬೆಳೆಗೆ ಹಸ್ತ ಮಳೆಯ ಜೀವಕಳೆ

rain
Published on

ರೈತರಲ್ಲಿ ಮೂಡಿದ ಮಂದಹಾಸ | ಕಳೆನಾಶಪಡಿಸಲು ಹೆಣಗಾಟ

ಮೂರ್ತಿ ಟಿ.ಸಿ.ಎಸ್​ ತಿಪಟೂರು
ಬಿಸಿಲ ತಾಪಕ್ಕೆ ಒಣಗುವಂತಾಗಿದ್ದ ರಾಗಿ ಪೈರಿಗೆ ಹಸ್ತ ಮಳೆಯಿಂದ ಜೀವಕಳೆ ಬಂದಿದ್ದು,
ರೈತರ ಮೊಗದಲ್ಲಿ ಮಂದಹಾಸ ತರಿಸಿದೆ.
ಹೌದು.. ಈ ಬಾರಿ ಮುಂಗಾರು ಮಳೆ ಉತ್ತಮವಾಗಿದ್ದ ಕಾರಣ, ತಾಲೂಕಿನ ಒಟ್ಟು 50,722 ಹೆಕ್ಟೇರ್​ ಬಿತ್ತನೆ ಪ್ರದೇಶದಲ್ಲಿ ಪ್ರಸ್ತುತ 23 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಮುಖ್ಯ ಆಹಾರ ಬೆಳೆಯಾಗಿ ರಾಗಿ ವಿಸ್ತರಣೆಗೊಂಡಿತ್ತು. ಆದರೆ, ಒಂದು ತಿಂಗಳಿಂದ ಮಳೆಗಿಂತ ಬಿಸಿಲಿನ ತಾಪಮಾನ ಹೆಚ್ಚಾದ ಕಾರಣ ರಾಗಿ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡು ರೈತರು ರಾಗಿ ಆಸೆಯನ್ನೇ ಬಿಟ್ಟಿದ್ದರು. ಕೃಷಿ ಇಲಾಖೆ ಕೂಡಾ ರಾಗಿ ಪೈರಿನಲ್ಲಿ ರೋಗ ಲಕ್ಷಣ ಗುರುತಿಸಿತ್ತು. ಆದರೆ, ಅದೃಷ್ಟವಶಾತ್​ ಒಂದು ವಾರದಿಂದ ಸುರಿಯುತ್ತಿರುವ ಹಸ್ತ ಮಳೆಯಿಂದ ರಾಗಿ ಪೈರು ನಿರೀಕ್ಷೆಗೂ ಮೀರಿ ಸುಧಾರಿಸುತ್ತಿದೆ. ಅ.10ರವರೆಗೂ ಹಸ್ತ ಮಳೆಯ ಸುರಿಯಲಿದ್ದು, ಬಾಡುವಂತಾಗಿದ್ದ ಎಲ್ಲ ಬೆಳೆಗಳಲ್ಲೂ ಜೀವಕಳೆ ಮರುಕಳಿಸುತ್ತಿದೆ. ಆದರೆ, ಮುಂಗಾರಿನ ಪ್ರಾರಂಭದಲ್ಲಿ ಮಳೆ ನಂಬಿ ನಿಗದಿಗಿಂತ ಹೆಚ್ಚು ಯೂರಿಯಾ ಗೊಬ್ಬರ ಬಳಸಿರುವ ಜತೆಗೆ ರಾಗಿ ಬಿತ್ತನೆ ಮಾಡುವ ಬದಲು ತರಾತುರಿಯಲ್ಲಿ ಇಡಿ ಹೊಲದ ತುಂಬ ರಾಗಿಕಾಳು ಬೀರಿದ ಕಾರಣ ಪೈರಿನ ಮಧ್ಯೆ ವಿಪರೀತ ಕಳೆ ಬೆಳೆದಿದ್ದು, ಇದನ್ನು ತೆರವುಗೊಳಿಸಲು ರೈತರು ಹರಸಾಹಸ ಪಡುವಂತಾಗಿದೆ.

ಸರಾಸರಿ 36.4ಮೀಮೀ ಮಳೆ
ಮೂರು ದಿನಗಳಲ್ಲಿ ತಾಲೂಕಿನ ಕಿಬ್ಬನಹಳ್ಳಿಯಲ್ಲಿ 56.3 ಮಿಮೀ, ನೊಣವಿನಕೆರೆಯಲ್ಲಿ 23.4 ಮಿಮೀ ಕಸಬಾ ಹೋಬಳಿಯಲ್ಲಿ 35.8 ಮಿಮೀ, ಹೊನ್ನವಳ್ಳಿ ವ್ಯಾಪ್ತಿಯಲ್ಲಿ 34 ಮಿಮೀ ಮಳೆಯಾಗಿದೆ. ಒಟ್ಟಾರೆ ತಾಲೂಕಿನಾದ್ಯಂತ ಸರಾಸರಿ 36.4 ಮಿಮೀ ಮಳೆಯಾಗಿದ್ದು, ಮುಂದಿನ ದಿನಗಳಲ್ಲೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

ತೆನೆಗಟ್ಟುವುದು ಗ್ಯಾರಂಟಿ
ಹಸ್ತಮಳೆಗೆ ರಾಗಿ ಪೈರು ಚೇತರಿಸಿಕೊಳ್ಳುತ್ತಿರುವುದರಿಂದ ಮುಂದಿನ 15 ದಿನಗಳಲ್ಲಿ ತೆನೆಗಟ್ಟುವ ಸಾಧ್ಯತೆ ಇದೆ. ಈ ಮಧ್ಯೆ ಒಂದು ಬಾರಿ ಮಳೆ ಬಂದರೂ ಬಹುತೇಕ ರಾಗಿ ಸಲು ಬರುವುದು ಗ್ಯಾರಂಟಿ. ಬೇರಿನ ಸದೃಢತೆ ಮತ್ತು ಪೈರು ಹಸಿರಾಗಲು ಅವಶ್ಯಕವಾದ ಸಾರಜನಕದ ಜತೆ ರಂಜಕ ಮಿಶ್ರಿತ ಗೊಬ್ಬರವನ್ನು ಎಕರೆಗೆ 15 ಕೆಜಿ ಲೆಕ್ಕದಲ್ಲಿ ಹಾಕುವುದರಿಂದ ಇಳುವರಿ ಹೆಚ್ಚಳಕ್ಕೆ ಸಹಾಯವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ರಾಗಿ ಪೈರು ಮೊಂಡ ಬೆಳೆ ಎಂದೇ ಪ್ರಖ್ಯಾತ. ಒಂದು ತಿಂಗಳ ನಂತರ ಬಂದ ಮಳೆಯಿಂದ ಮತ್ತೆ ಚೇತರಿಸಿಕೊಂಡಿದೆ. ಬಿತ್ತನೆ ವೇಳೆ ಮಧ್ಯೆ ಜಾಗ ಬಿಟ್ಟು ಸಾಲಿನಲ್ಲಿ ಬಿತ್ತನೆ ಮಾಡುವುದು, ಕಾಲಕಾಲಕ್ಕೆ ಕಳೆ ತೆರವುಗೊಳಿಸುವುದರಿಂದ ಅಧಿಕ ಇಳುವರಿ ಸಾಧ್ಯವಾಗುತ್ತದೆ. ದಟ್ಟವಾಗಿ ಬಿತ್ತನೆ ಮಾಡಿರುವ ಕಡೆ ಪೈರು ಹೆಚ್ಚು ಕಾಳುಗಟ್ಟದೇ ಇಳುವರಿ ಮೇಲೆ ಪರಿಣಾಮ ಬೀರಬಹುದು. | ಎಂ.ಪಿ.ಪವನ್​ ಸಹಾಯಕ ಕೃಷಿ ನಿರ್ದೇಶಕ

ಇನ್ನೇನು ಬರಗಾಲವೇ ಗತಿ ಎನ್ನುವ ಸ್ಥಿತಿಯಲ್ಲಿದ್ದ ರೈತರಿಗೆ ಮೂರು ದಿನಗಳಿಂದ ಸುರಿಯುತ್ತಿರುವ ಹಸ್ತ ಮಳೆ ರಾಗಿ ಪೈರಿನ ಭರವಸೆ ಮೂಡಿಸಿದೆ. ಮುಂದಿನ 10&-15 ದಿನಗಳಲ್ಲಿ ಪೈರು ತೆನೆಗಟ್ಟಲಿದೆ. ಈಗ ಬರುತ್ತಿರುವ ಮಳೆ ಕಟಾವಿನ ಸಮಯದಲ್ಲಿ ಬಿಡುವು ಕೊಟ್ಟರೆ ರಾಗಿ ಕಣಜ ಸೇರುವುದು ಖಚಿತ. | ತಿಮ್ಲಾಪುರ ದೇವರಾಜು ರೈತ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net