ಸೋರುತ್ತಿದೆ ಬಂಟ್ವಾಳದ ಸಂಚಾರಿ ಸ್ಟೇಷನ್

Bantwal police station
Published on

-ಸಂದೀಪ್ ಸಾಲ್ಯಾನ್ ಬಂಟ್ವಾಳ
ಕಟ್ಟಡದ ಮೂಲೆ ಮೂಲೆಯಲ್ಲೂ ನೀರ ಒರತೆ, ಪಾಚಿಕಟ್ಟಿದ ಗೋಡೆಗಳು, ಮೇಲಿಂದ ಜಿನುಗುತ್ತಿರುವ ನೀರು
-ಇದು ಮೆಲ್ಕಾರ್‌ನಲ್ಲಿರುವ ಬಂಟ್ವಾಳದ ಸಂಚಾರಿ ಪೊಲೀಸ್ ಠಾಣೆಯ ದಯಾನೀಯ ಸ್ಥಿತಿ.

ಮಳೆಗೆ ರಸ್ತೆ ಬದಿ ಕೊಡೆ ಹಿಡಿದು ಟ್ರಾಫಿಕ್ ಕೆಲಸ ನಿರ್ವಹಿಸುವ ಬಂಟ್ವಾಳ ಸಂಚಾರಿ ಪೊಲೀಸರು ಕಚೇರಿಗೆ ಬಂದ ಬಳಿಕವೂ ಕೊಡೆ ಹಿಡಿದೋ, ರೈನ್ ಕೋಟ್ ಧರಿಸಿಯೋ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.

ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಚಾರಿ ಪೊಲೀಸ್ ಠಾಣೆಯ ಈ ಸ್ಥಿತಿ ಠಾಣೆ ಆರಂಭಗೊಂಡ ವರ್ಷದಿಂದ ಇಂದಿನವರೆಗೂ ಹಾಗೇ ಇದೆ. ಸ್ವಂತ ಕಟ್ಟಡ ನಿರ್ಮಾಣವಾಗುವರೆಗೂ ಈ ಅಸಹನೆಯನ್ನು ಸಹಿಸಿಕೊಂಡೇ ಪೊಲೀಸರು ಕಾರ್ಯನಿರ್ವಹಿಸಬೇಕಾಗಿದೆ.

ಕಚೇರಿ ಹಳೆಯ ಬಾಡಿಗೆ ಕಟ್ಟಡದಲ್ಲಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಆರ್‌ಸಿಸಿ ಕಟ್ಟಡದಲ್ಲಿ ನೀರು ಸಂಪೂರ್ಣವಾಗಿ ಸೋರಿಕೆಯಾಗುತ್ತಿದ್ದು ಸುರಕ್ಷಿತವಾಗಿಲ್ಲ. ಗೋಡೆಗಳಲ್ಲಿ ನೀರಿನ ಪಸೆ ಹರಡಿಕೊಂಡು ಹನಿ ಹನಿಯಾಗಿ ನೆಲಕ್ಕೆ ಬೀಳುತ್ತಿರುತ್ತದೆ. ಕಚೇರಿ ಒಳಗಡೆ ನೀರು ಬೀಳದಂತೆ ತಡೆಯಲು ಪ್ಲಾಸ್ಟಿಕ್ ಕಟ್ಟಿದ್ದಾರೆ. ಅಲ್ಲಲ್ಲಿ ಬಕೆಟ್ ಇಟ್ಟು ನೆಲಕ್ಕೆ ನೀರು ಬೀಳದಂತೆ ಯತ್ನಿಸಲಾಗಿದೆ. ಗೋಡೆಗಳೆಲ್ಲ ನೀರಿನಿಂದ ಒದ್ದೆಯಾಗುವ ಕಾರಣ ವಿದ್ಯುತ್ ಸಂಚಾರವಾಗುವ ಅಪಾಯವೂ ಇದೆ.

ಫ್ಯಾನ್ ಅಳವಡಿಸಿದ ಜಾಗದಲ್ಲಿ ನೀರು ಸೋರಿಕೆಯಾಗುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಕೊಠಡಿಗಳ ಫ್ಯಾನ್‌ಗಳನ್ನು ಕಳಚಿ ಇಡಲಾಗಿದೆ. ಬಾಡಿಗೆ ಪಾವತಿಸಿದರೂ ಕನಿಷ್ಠ ನಿರ್ವಹಣೆ ಇಲ್ಲದ ಕಾರಣ ಕಟ್ಟಡಕ್ಕೆ ಅಸುರಕ್ಷತೆ ಕಾಡುತ್ತಿದೆ.

ಕಡತಗಳ ಸಂರಕ್ಷಣೆ ಕಷ್ಟ: ಸೋರುತ್ತಿರುವ ಈ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುವ ಕಷ್ಟ ಒಂದೆಡೆಯಾದರೆ ದಾಖಲೆಗಳನ್ನು ಸಂಗ್ರಹಿಸಿಡುವುದು ಇನ್ನೊಂದು ಸಮಸ್ಯೆ. ಕಟ್ಟಡದ ಎಲ್ಲ ಕೋಣೆಗಳಲ್ಲೂ ನೀರು ಜಿನುಗುವುದರಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಪೊಲೀಸರಿಗೆ ಸವಾಲಾಗುತ್ತಿದೆ. ಕಂಪ್ಯೂಟರನ್ನು ನೀರ ಹನಿಯಿಂದ ಸಂರಕ್ಷಿಸಲು ಪೊಲೀಸರು ಹರಸಾಹಸಪಡುತ್ತಾರೆ.

ಸ್ವಂತ ಕಟ್ಟಡ ಕನಸು: ಸಂಚಾರಿ ಪೊಲೀಸ್ ಠಾಣೆಗೆ ಸ್ವಂತ ಕಟ್ಟಡ ನಿರ್ಮಿಸುವ ಪ್ರಯತ್ನಗಳಾವುದೂ ಪ್ರಯತ್ನ ನೀಡುತ್ತಿಲ್ಲ. ಬಂಟ್ವಾಳಕ್ಕೆ ಸಂಚಾರಿ ಪೊಲೀಸ್ ಠಾಣೆ ಮಂಜೂರುಗೊಂಡು 6 ವರ್ಷ ಕಳೆದರೂ ಠಾಣೆ ನಿರ್ಮಿಸಲು ಅನುಕೂಲವಾಗುವಂತಹ ಸರ್ಕಾರಿ ಜಮೀನು ನಗರ ವ್ಯಾಪ್ತಿಯಲ್ಲಿ ಲಭ್ಯವಾಗದ ಕಾರಣ ಸ್ವಂತ ಕಟ್ಟಡ ನಿರ್ಮಾಣದ ಕನಸು ಇನ್ನೂ ಕಡತದಲ್ಲಿಯೇ ಉಳಿದಿದೆ. ಹಲವು ಮನವಿಗಳ ಬಳಿಕ ಮತ್ತೆ ಜಮೀನು ಮೀಸಲಿಡುವಂತೆ ಕೋರಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜನರಿಗೆ ರಕ್ಷಣೆ ನೀಡುವ ಪೊಲೀಸರೇ ಅಭದ್ರತೆಯಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ಶೋಚನೀಯ.
 
ಸಂಚಾರಿ ಪೊಲೀಸ್ ಠಾಣೆ ಬಾಡಿಗೆ ಕಟ್ಟಡದಲ್ಲಿದ್ದು ನೀರು ಸೋರಿಕೆಯಾಗದಂತೆ ತಡೆಯಲು ಟಾರ್ಪಾಲು ಹಾಕಲಾಗಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಎರಡು ಕಡೆ ಜಮೀನು ಗುರುತಿಸಲಾಗಿದ್ದು ಜಮೀನು ಮಂಜೂರಾತಿಗಾಗಿ ಎದುರು ನೋಡುತ್ತಿದ್ದೇವೆ.
-ವೆಲೆಂಟೈನ್ ಡಿಸೋಜ, ಡಿವೈಎಸ್ಪಿ ಬಂಟ್ವಾಳ ಉಪವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net