

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗನಾಯಕಹಳ್ಳಿ, ವರದೇನಹಳ್ಳಿಯ ಪರಿಶಿಷ್ಟ ಜಾತಿ ಜನರು ವಾಸಿಸುತ್ತಿರುವ ಕಾಲನಿಗಳಿಗೆ ಮಳೆಯಾದರೆ ಸಾಕು ಅಪಾರ ಸಂಕಷ್ಟ ಎದುರಿಸಬೇಕಾಗಿದೆ.
ಮಳೆ ಸುರಿದರೆ ನೀರು ಮನೆಯೊಳಗೆ ನುಗ್ಗಿ ಪಿಠೋಪಕರಣಗಳು ಹಾನಿಯಾಗುತ್ತವೆ, ಇಲ್ಲಿನ ಗ್ರಾಪಂ ಅಧಿಕಾರಿಗಳು ಸೂಕ್ತಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಪ್ರತಿ ಬಾರಿಯೂ ಸಂಕಷ್ಟ ಎದುರಿಸುವಂತಾಗುತ್ತದೆ. ಇತ್ತೀಚಿಗೆ ಸುರಿದ ಮಳೆ ವೇಳೆ ನೀರು ಮನೆಗಳಿಗೆ ನುಗ್ಗಿ ಮನೆಯಲ್ಲಿನ ವಸ್ತುಗಳು ಹಾನಿಯಾಗಿವೆ.
ಚರಂಡಿ ಅವ್ಯವಸ್ಥೆ:
ರಸ್ತೆ ನಿರ್ಮಾಣಕ್ಕಾಗಿ ಕಳೆದ 3 ವರ್ಷಗಳ ಹಿಂದೆ ಜೆಸಿಬಿಯಲ್ಲಿ ಮಣ್ಣು ತೋಡಿಸಿದ್ದು, ಇಲ್ಲಿವರೆಗೆ ಮುಚ್ಚಿಲ್ಲ, ಚರಂಡಿಯಲ್ಲಿ ನೀರು ಹರಿಯದ ಪರಿಣಾಮ ಮಳೆ ನೀರು ತಗ್ಗು ಪ್ರದೇಶಗಳ ಮೂಲಕ ವಸತಿ ಪ್ರದೇಶಗಳಿಗೆ ನುಗ್ಗಿಲಾರಂಭಿಸಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚರಂಡಿ ತ್ಯಾಜ್ಯ ನೀರಿನ ಜತೆಗೆ ಮಳೆ ನೀರು ಮಿಶ್ರಣ ಗೊಂಡು ಮುಂದಕ್ಕೆ ಹರಿಯದೆ ಒಂದೆಡೆ ನಿಂದು ಸಾಂಕ್ರಾಮಿಕ ರೋಗಗಳ ಭೀತಿಯ ಜತೆಗೆ ಮನೆಗಳಿಗೆ ತ್ಯಾಜ್ಯ ನೀರು ನುಗ್ಗುವ ಆತಂಕವಿದೆ, ಈ ಬಗ್ಗೆ ವಾರ್ಡ್‌ಸಭೆ, ಗ್ರಾಮಸಭೆಗಳಲ್ಲಿ ಹಲವು ಬಾರಿ ಅಲವತ್ತುಗೊಳ್ಳಲಾಗಿದೆ, ತಾಪಂ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೇರಿ ಸಂಬಂಧಪಟ್ಟವರಿಗೆಲ್ಲ ಮನವಿ ಮಾಡಲಾಗಿದೆ ಆದರೆ ಇದುವರೆಗೆ ಯಾರೂ ಸ್ಪಂದಿಸಿಲ್ಲ. ಮಳೆ ಬಂತೆಂದರೆ ದುಸ್ವಪ್ನ ಕಂಡಂತಾಗುತ್ತದೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ.
ವಿ.ರಮೇಶ್, ಸ್ಥಳೀಯ ಮುಖಂಡ