

ಕುಕನೂರು: ಪಟ್ಟಣದ ಪಪಂ ಕಾರ್ಯಾಲಯದಿಂದ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾರ್ಯಗಳ ಮಾಹಿತಿ ಸಾರ್ವಜನಿಕರಿಗೆ ತಿಳಿಸಬೇಕು ಎಂದು ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ಪಪಂ ಮುಖ್ಯಾಧಿಕಾರಿ ನಭಿಸಾಬ ಕಂದಗಲ್‌ಗೆ ಬುಧವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಮಳೆಯಲ್ಲೂ ಮಕ್ಕಳ ನೃತ್ಯದ ಝಲಕ್
ಪಟ್ಟಣದ ಬಸ್ ನಿಲ್ದಾಣದಿಂದ ಜವಳದ ದಾರಿಯಲ್ಲಿರುವ ಕೆಇಬಿ ಕಚೇರಿವರೆಗೆ ಚರಂಡಿ ಹಾಗೂ ರಸ್ತೆ ನಿರ್ಮಾಣದ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಸಮರೋಪಾದಿಯಲ್ಲಿ ಚರಂಡಿ ಹಾಗೂ ರಸ್ತೆ ನಿರ್ಮಾಣಗೊಳ್ಳಬೇಕು. ಪಟ್ಟಣದಲ್ಲಿ ಇತ್ತಿಚ್ಚಿಗೆ ಸುರಿದ ಮಳೆಯಿಂದ ನೀರು ಮನೆಗೆ ನುಗ್ಗಿದೆ. ಚರಂಡಿ ವ್ಯವಸ್ಥೆ ಹಾಗೂ ಮಳೆ ನೀರು ನಿರ್ವಹಣೆಯ ಬಗ್ಗೆ ಕ್ರಮ ಜರುಗಿಸಬೇಕು. ಕೋಳಿಪೇಟೆಯಿಂದ ಹಿಡಿದು ಗಾಂಧಿನಗರದವರಗೆ ಹೆದ್ದಾರಿ ಪಕ್ಕದ ಚರಂಡಿಗಳ ಅವೈಜ್ಞಾನಿಕ ನಿರ್ವಹಣೆಯಿಂದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
ಬಸ್ ನಿಲ್ದಾಣದ ಪಕ್ಕ ಹಾಗೂ ಹಿಂದಿನ ಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ಜನತೆ ಭಯದಿಂದ ರಾತ್ರಿ ಕಳೆದಿದ್ದಾರೆ. ಸಂತೆಯಲ್ಲಿ ಚರಂಡಿಗಳ ತಾಂತ್ರಿಕ ದೋಷದಿಂದ ಮಳೆ ಸೃಷ್ಟಿಸಿದ ಪ್ರವಾಹದಲ್ಲಿ ಅನ್ನದಾನೇಶ್ವರ ಮಠದ ಮುಂದೆ ತಾಲೂಕಿನ ಸಂತೆಗೆ ಬಂದ ಜನ ಹಾಗೂ ಇಲ್ಲಿನ ಜನರು ಪರದಾಡಿದ್ದಾರೆ. ಪಟ್ಟಣದ ಎಸ್‌ಎಫ್‌ಎಸ್ ಶಾಲೆಯಿಂದ ಶ್ರೀ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಅಮೃತ್ ಯೋಜನೆ ಕಾಮಗಾರಿಗಾಗಿ ರಸ್ತೆ ಪಕ್ಕದಲ್ಲಿ ಪೈಪ್ ಲೈನ್ ಅಳವಡಿಕೆ ಮಾಡಿ ಮಣ್ಣನ್ನು ಹಾಕಿದ್ದಾರೆ.
ಮಳೆಗೆ ಅಲ್ಲಲ್ಲಿ ಪೈಪ್ ಲೈನ್ ತೆಗ್ಗು ಕೊರಕಲು ಬಿದ್ದು, ರಸ್ತೆಯಲ್ಲಿ ಸಂಚರಿಸುವ ಜನತೆ ಹಾಗೂ ವಾಹನಗಳಿಗೆ ಅಪಾಯ ಆಹ್ವಾನ ನೀಡುತ್ತಿದೆ. ಕೊರಕಲು ಬಿದ್ದಿರುವ ಜಾಗದಲ್ಲಿ ಸಿಸಿ ರಸ್ತೆ ಪುನಃ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಹಿತ ರಕ್ಷಣಾ ವೇದಿಕೆ ಸಂಚಾಲಕರಾದ ರವಿ ಜಕ್ಕಾ, ಮಂಜುನಾಥ ನಾಡಗೌಡರ, ಪ್ರಮುಖರಾದ ಅಂದಪ್ಪ ಜವಳಿ, ಸಿದ್ಲಿಂಗಯ್ಯ ಬಂಡಿಮಠ, ಕನಕಪ್ಪ ಬ್ಯಾಡರ್, ಈಶಪ್ಪ ಸಬರದ, ವಿರೇಶ ಸಬರದ, ಮಹಾದೇವಪ್ಪ ಕುರಿ, ಗೋವಿಂದರಾವ ಕುಲಕರ್ಣಿ ಇತರರಿದ್ದರು.