

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಹೆದ್ದಾರಿ ಬದಿ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿಯುವುದರ ಪರಿಣಾಮ ಅಪಘಾತಗಳಿಗೆ ಕಾರಣವಾಗುತ್ತಿರುವ ಪರಿಸ್ಥಿತಿ ಕಾರ್ಕಳ- ಪಡುಬಿದ್ರಿರಾಜ್ಯ ಹೆದ್ದಾರಿಯಲ್ಲಿದೆ. ಪಡುಬಿದ್ರಿಯಿಂದ ಕಾರ್ಕಳ ಸಾಗುವ ರಾಜ್ಯ ಹೆದ್ದಾರಿ 1ರ 32 ಕಿ.ಮೀ ಉದ್ದದ ರಸ್ತೆಯಲ್ಲಿ ಮಳೆ ನೀರು ಚರಂಡಿಯಲ್ಲಿ ಹರಿಯದೆ ನೇರವಾಗಿ ರಸ್ತೆಯಲ್ಲಿ ಹರಿಯುವುದರ ಪರಿಣಾಮ ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ.
ಮಳೆಗೆ ರಸ್ತೆಯ ತುಂಬೆಲ್ಲ ನೀರು ಹರಿಯುವುದರಿಂದ ಅಪಘಾತಗಳಿಗೆ ಎಡೆ ಮಾಡಿಕೊಡುತ್ತಿದೆ. ಮಳೆ ನೀರಿನೊಂದಿಗೆ ರಸ್ತೆಗೆ ಹರಿದು ಬರುವ ಕಸ, ಕಡಿ,್ಡ ಕಲ್ಲು, ಮಣ್ಣು ಎಲ್ಲವೂ ರಸ್ತೆಯಲ್ಲೇ ಶೇಖರಣೆಗೊಳ್ಳುವುದರಿಂದ ಬೈಕ್ ಸವಾರರಂತೂ ನಿತ್ಯ ಎಡವಟ್ಟು ಮಾಡಿಕೊಂಡ ನಿದರ್ಶನ ಸಾಕಷ್ಟಿದೆ. ಮಾವಿನಕಟ್ಟೆ ಸಮೀಪದ ತಿರುವು ರಸ್ತೆ, ನಂದಳಿಕೆ ಲಕ್ಷ್ಮೀಜನಾರ್ದನ ದೇವಾಲಯ ತಿರುವು ರಸ್ತೆ, ಬೆಳ್ಮಣ್, ಸಾಂತೂರು, ಅಡ್ವೆ ನಂದಿಕೂರು ಪರಿಸರದಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿದಾಡುತ್ತಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ.
ರಾಜ್ಯ ಹೆದ್ದಾರಿಯುದ್ದಕ್ಕೂ ಈ ಬಾರಿ ಚರಂಡಿ ಸಂಪೂರ್ಣ ಮಾಯಾವಾಗಿದೆ. ಬಹುತೇಕ ಕಡೆ ಪೈಪ್‌ಲೈನ್ ಅಳವಡಿಕೆಗಾಗಿ ಅಗೆದು ಹಾಕಿದ ಪರಿಣಾಮ ಚರಂಡಿ ತುಂಬೆಲ್ಲ ಮಣ್ಣು ತುಂಬಿಕೊಂಡಿದ್ದು, ಚರಂಡಿಯೇ ಇಲ್ಲದಂತಾಗಿದೆ. ಜೋರಾಗಿ ಮಳೆ ಬಂದರೆ ಹೆದ್ದಾರಿಯುದ್ದಕ್ಕೂ ಮಳೆ ನೀರು ಹರಿದು ಚರಂಡಿಯಾಗಿ ಮಾರ್ಪಡಾಗುತ್ತದೆ. ಹೀಗಾಗಿ ವಾಹನಗಳು ಓಡಾಡುವುದೇ ಕಷ್ಟಕರವಾಗಿದೆ. ಸಮಸ್ಯೆ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ಸ್ಥಳೀಯ ಗ್ರಾಪಂಗೆ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ.
ಹೆದ್ದಾರಿಯಲ್ಲಿ ಮಳೆ ನೀರು ಹರಿಯುವುದರ ಪರಿಣಾಮ ಸಾಕಷ್ಟು ಕಡೆಗಳಲ್ಲಿ ನಿರಂತರ ಅಪಘಾತಗಳ ಸರಮಾಲೆ ಹೆಚ್ಚಾಗುತ್ತಿದೆ. ನೀಚಾಲು ತಿರುವು ರಸ್ತೆ, ನಂದಿಕೂರು, ಬೆಳ್ಮಣ್‌ನ ನೀಚಾಲು ತಿರುವು ಭಾಗ, ನಂದಳಿಕೆ ಬೋರ್ಡು ಶಾಲೆ ಇಳಿಜಾರು ರಸ್ತೆಯಿಂದ ದಡ್ಡು ದ್ವಾರ, ಮಾವಿನಕಟ್ಟೆ, ಪರ್ಪಲೆ ಭಾಗದಲ್ಲಿ ಅಪಘಾತಗಳಿಗೆ ಕಾರಣವಾಗುತ್ತಿದೆ. ಇತ್ತೀಚೆಗೆ ನಂದಳಿಕೆ ಇಳಿಜಾರು ರಸ್ತೆಯಲ್ಲಿ ಕಾರುಗಳು ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಘಟನೆ ನಡೆದಿದೆ.
ಹೆದ್ದಾರಿ ಬದಿಯಲ್ಲಿ ಮಳೆಗಾಲಕ್ಕೂ ಮುನ್ನ ಚರಂಡಿ ನಿರ್ವಹಣೆ ಕಾಮಗಾರಿ ಇಲಾಖೆ ವತಿಯಿಂದ ಮಾಡಬೇಕಾಗಿತ್ತು. ಆದರೆ 32 ಕಿ.ಮೀ ಉದ್ದಕ್ಕೂ ಇಲಾಖೆ ಕಾಮಗಾರಿ ಕೈಗೆತ್ತಿಕೊಳ್ಳದ ಪರಿಣಾಮ ಹೆದ್ದಾರಿಯಲ್ಲೇ ನೀರು ಹರಿಯುವ ಸ್ಥಿತಿ ನಿರ್ಮಾಣಗೊಂಡಿದೆ. ಬಹುತೇಕ ಕಡೆಗಳಲ್ಲಿ ಸುಂದರವಾಗಿದ್ದ ಚರಂಡಿ ವ್ಯವಸ್ಥೆಯನ್ನು ಪೈಪ್‌ಲೈನ್ ಕಾಮಗಾರಿ ನೆಪದಲ್ಲಿ ಮಣ್ಣು ಹಾಕಿ ಮುಚ್ಚಿದ್ದು, ಅಪಘಾತಗಳಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಸಮಸ್ಯೆಗೆ ಮುಕ್ತಿ ನೀಡುವಲ್ಲಿ ಇಲಾಖೆ ಕೂಡಲೇ ಎಚ್ಚೆತ್ತು ಚರಂಡಿ ನಿರ್ವಹಿಸಿ ಹೆದ್ದಾರಿಯಲ್ಲಿ ನೀರು ಹರಿಯುವುದನ್ನು ನಿಲ್ಲಿಸಬೇಕಾಗಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹೆದ್ದಾರಿಯುದ್ದಕ್ಕೂ ಮಳೆ ನೀರು ಹರಿಯುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಗಳಾಗುತ್ತಿದೆ. ಕೆಲವೊಂದು ಬಾರಿ ಅಪಘಾತಕ್ಕೂ ಕಾರಣವಾಗುತ್ತಿದೆ.-ಧೀರಜ್, ಗ್ರಾಮಸ್ಥರು.
ಸರಿಯಾದ ಚರಂಡಿ ವ್ಯವಸ್ಥೆಗಳಿಲ್ಲದೆ ಹೆದ್ದಾರಿಯಲ್ಲಿ ಹರಿಯುವ ಮಳೆ ನೀರಿನಿಂದ ಈಗಾಗಲೇ ಸಾಕಷ್ಟು ಅಪಘಾತಗಳು ನಡೆದಿದೆ. ಅನೇಕ ಬೈಕ್ ಸವಾರರು ನಿತ್ಯ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಹಲವು ಬಾರಿ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ.-ಹೇಮಚಂದ್ರ, ವಾಹನ ಸವಾರ.