

ಹೊನ್ನಾವರ: ತಾಲೂಕಿನಲ್ಲಿ ಸೋಮವಾರವೂ ಧಾರಾಕಾರ ಮಳೆ ಮುಂದುವರಿದಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನಿರಂತರ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಗುಂಡಬಾಳ, ಭಾಸ್ಕೇರಿ ಮತ್ತು ಬಡಗಣಿ ನದಿಗಳು ತುಂಬಿ ಹರಿಯುತ್ತಿದ್ದು, ಮನೆಗಳಿಗೆ ನೀರು ನುಗ್ಗಿದೆ. ಕೆಲವು ಗ್ರಾಮಗಳ ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಗುಂಡಬಾಳ ನದಿಯ ತೀರದ ಗುಂಡಬಾಳ, ಕೆಂಚಾಗಾರ, ಗುಂಡಿಬೈಲ್, ಚಿಕ್ಕನಕೋಡ, ಮುಟ್ಟಾ, ಹಾಡಗೇರಿ, ಹುಡಗೋಡ, ಹಡಿನಬಾಳ, ಕಾವೂರ, ಕಡಗೇರಿ, ನಾಥಗೇರಿಯ ಮನೆ ಮತ್ತು ತೋಟಗಳಿಗೆ ನೆರೆಯ ನೀರು ನುಗ್ಗಿದೆ. ನೆರೆಪೀಡಿತ ಸ್ಥಳಕ್ಕೆ ಸೋಮವಾರ ಸಹಾಯಕ ಆಯುಕ್ತೆ ಡಾ. ನಯನಾ, ತಹಸೀಲ್ದಾರ್ ರವಿರಾಜ ದೀಕ್ಷಿತ್, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಕಾಳಜಿ ಕೇಂದ್ರ: ಗುಂಡಬಾಳ ನದಿ ತೀರದ ಚಿಕ್ಕನಕೋಡ ಮತ್ತು ಗುಂಡಿಬೈಲ್‌ನಲ್ಲಿರುವ ಶಾಲೆಗಳಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ಗುಂಡಬಾಳ ಗ್ರಾಮದ ಹೆಬ್ಬೈಲ್ ಅಂಗನವಾಡಿ ಕೇಂದ್ರದಲ್ಲಿ ಕಾಳಜಿಕೇಂದ್ರ ತೆರೆಯಲಾಗಿದೆ. ಭಾಸ್ಕೇರಿ ಹೊಳೆಯ ತೀರದಲ್ಲಿರುವ ಮುಗ್ವಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುರಕಟ್ಟೆ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಬೇಕಾಗುವ ಅನುಕೂಲ ಮಾಡಿಕೊಡಲಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಮನೆಗಳಿಗೆ ಹಾನಿ: ತಾಲೂಕಿನ ವಿವಿಧೆಡೆ ಭಾರಿ ಗಾಳಿ-ಮಳೆಯಿಂದ ಮರ ಬಿದ್ದು ಐದು ಮನೆಗಳಿಗೆ ಹಾನಿಯಾಗಿದೆ. ಕಾಸರಕೋಡದ ಲಕ್ಷ್ಮಿ ರಘುಪತಿ ಗೌಡ ಮತ್ತು ಗಣೇಶ ಮರ್ತು ನಾಯ್ಕ ಅವರ ಮನೆಯ ಮೆಲ್ಛಾವಣಿಗೆ ಹಾನಿಯಾಗಿದೆ. ಪಟ್ಟಣದ ಸಿರಾಜ್ ಅಬ್ದುಲ್ ಲತೀಫ್ ಶೇಖ್ ಅವರ ಮನೆಗೆ ಹಾನಿಯಾಗಿದೆ. ಹಳದಿಪುರದ ನಿವಾಸಿಗಳಾದ ತುಳುಸು ಜಟ್ಟು ಗೌಡ ಮತ್ತು ನಾಗಿ ಹನುಮಂತ ಗೌಡ ಅವರ ಮನೆಗೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಹಾನಿ ಅಂದಾಜಿಸಿದ್ದಾರೆ.