

ಪ್ರಶಾಂತ ಭಾಗ್ವತ ಉಡುಪಿ
ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕರಾವಳಿ ಭಾಗದಲ್ಲಿ ಮುಂಗಾರು ಪೂರ್ವದಲ್ಲೇ ಅಬ್ಬರದ ಮಳೆಯಾಗುತ್ತಿದೆ. ಇದು ಈ ಬಾರಿಯ ಮಳೆಗಾಲವು ಭೀಕರ ಸ್ವರೂಪ ತಾಳುವ ಮುನ್ಸೂಚನೆಯೂ ಆಗಿದೆ.
ಕಳೆದ ವರ್ಷ ವಾಡಿಕೆಗಿಂತ ಶೆ.16ರಷ್ಟು ಹೆಚ್ಚು ಮಳೆ ಸುರಿದು ಉಡುಪಿ ಜಿಲ್ಲೆಯಲ್ಲಿ ಅನೇಕ ಕಡಗಳಲ್ಲಿ ಸಮಸ್ಯೆ ಸೃಷ್ಟಿಯಾಗಿತ್ತು. ರಾಜಾಂಗಣ, ಅತ್ರಾಡಿ ಮದಗ, ಗುಂಡಿಬೈಲು, ಬನ್ನಂಜೆ ಗರೋಡಿ ಸೇರಿದಂತೆ ವಿವಿಧ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಕೃತಕ ನೆರೆ ಸಂಭವಿಸಿತ್ತು. ಮನೆ-ಅಂಗಡಿಗಳ ಒಳಗೆ ನೀರು ನಿಂತಿತ್ತು. ಅಪಾರ ಪ್ರಮಾಣದಲ್ಲಿ ಭತ್ತ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ನಾಶಗೊಂಡಿದ್ದವು. ಕಾಪು, ಮರವಂತೆ ಇನ್ನಿತರ ಕಡೆ ಕಡಲ್ಕೊರೆತವೂ ಆಗಿತ್ತು.
ಮೇ 20ರಿಂದ 24ರ ವರೆಗೆ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆಯಂತೆ ಮೇ 20ರಂದು ಬೆಳಗ್ಗೆ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು. ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗೆ ವರೆಗೆ 125 ಮಿ.ಮೀ. ಮಳೆಯಾಗಿತ್ತು. ಶಾಲೆಗಳಿಗೆ ಬೇಸಿಗೆ ರಜೆ ಇರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮಳೆಯಿಂದ ಪಾರಾಗಿದ್ದರು. ಮೇ 21ರಂದು ಮಳೆ ವಿರಾಮ ಪಡೆದಿತ್ತು.
ಉಡುಪಿಯಲ್ಲಿ ಕಳೆದ ವರ್ಷ ಸಮಸ್ಯೆ ಉಂಟಾಗಿದ್ದ ಕಡೆ ಈ ಬಾರಿ ಸಮಸ್ಯೆ ಆಗಿಲ್ಲ. ಮಣಿಪಾಲ ಸಿಂಡಿಕೇಟ್ ಸರ್ಕಲ್ನ ಕೆಳಭಾಗದಿಂದ ಲಕ್ಷ್ಮೀಂದ್ರ ನಗರದ ಕಡೆ ಮಾತ್ರ ಸಮಸ್ಯೆ ಆಗಿದೆ. ಅಲ್ಲಿನ ತೋಡು ಬ್ಲಾಕ್ ಆಗಿದ್ದರಿಂದ ನೀರು ರಸ್ತೆ ಮೇಲೆ ಹರಿದು ತೊಂದರೆಯಾಗಿದೆ. ಅದನ್ನೀಗ ಸರಿಪಡಿಸಲಾಗಿದೆ. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ