

ಹುಬ್ಬಳ್ಳಿ: ಮಳೆ ಬರುತ್ತಿದ್ದ ಸಂದರ್ಭದಲ್ಲಿ ಕಾಂಪೌಂಡ್ ಗೋಡೆ ಕುಸಿದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಇಲ್ಲಿನ ಗೋಕುಲ ರಸ್ತೆ ದಾರುವಾಲಾ ಮದ್ಯದ ಅಂಗಡಿ ಕೆಳಗೆ ಕಟಿಂಗ್ ಶಾಪ್ ಬಳಿ ಬುಧವಾರ ಸಂಭವಿಸಿದೆ.
ಕಲಬುರಗಿ ಮೂಲದ ದರ್ಶನ ಹೀರಾಪೂರ (17) ಮೃತಪಟ್ಟ ಯುವಕ. ಕಟಿಂಗ್ ಅಂಗಡಿ ಮಾಲೀಕರ ಪರಿಚಯ ಹೊಂದಿದ್ದ ದರ್ಶನ್ ಅಂಗಡಿಯವರೊಂದಿಗೆ ಮಾತನಾಡುತ್ತ ಕುಳಿತುಕೊಂಡಿದ್ದ. ಈ ವೇಳೆ ಜೋರಾಗಿ ಮಳೆ ಸುರಿದಿದ್ದರಿಂದ ಫುಟ್ ಪಾತ್ ಬಳಿಯಿಂದ ಅಂಗಡಿ ಕಡೆಗೆ ನೀರು ನುಗ್ಗುತ್ತಿತ್ತು. ಇದನ್ನು ತಡೆಯಲು ಮುಂದಾದಾಗ ಗೋಡೆ ಕುಸಿದಿದೆ.
ಗೋಡೆಯ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ದರ್ಶನ್ ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಗೋಕುಲ ರೋಡ್ ಠಾಣೆ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿಚಿ೯ ಹಾಗೂ ಸಿಬ್ಬಂದಿ ಪರಿಶೀಲಿಸುತ್ತಿದ್ದಾರೆ.