ಐತಿಹಾಸಿಕ ಹಿರೇಕೆರೆಯಲ್ಲಿ ಗಂಗಮ್ಮನ ಪೂಜೆ

dj nyk temple
Published on

ನಾಯಕನಹಟ್ಟಿ: ಸಾಂಪ್ರದಾಯಿಕ ಕರಡಿ ಮಜಲು ವಾದ್ಯಗಳ ನಿನಾದ, ನಂದಿಕೋಲು, ನಂದಿಧ್ವಜಗಳ ಮೆರವಣಿಗೆ, ಸಿಂಗಾರಗೊಂಡ ಪಟ್ಟದ ಗೂಳಿಯ ರಾಜ ಗಾಂಭೀರ್ಯ ನಡಿಗೆಯು ಐತಿಹಾಸಿಕ ಹಿರೇಕೆರೆಯ ಕೆರೆಗಂಗಮ್ಮ ಪೂಜೆ ಕಾರ್ಯಕ್ಕೆ ವಿಶೇಷ ಮೆರುಗು ತಂದಿತು.

ನಾಯಕನಹಟ್ಟಿ ದೈವಸ್ಥರು ಹಿಂದಿನಿಂದಲೂ ಮಳೆಗಾಗಿ ಕೆರೆಗಂಗಮ್ಮನ ಪೂಜೆ ಮೊರೆಹೋಗಿದ್ದಾರೆ. ಅದರಂತೆ ಗುರುವಾರ ಸಕಲಶಾಸ್ತ್ರ ಸಂಪ್ರದಾಯಗಳೊಂದಿಗೆ ನೂರಾರು ಭಕ್ತರು, ದೈವಸ್ಥರು, ಗ್ರಾಮಸ್ಥರು ಕೆರೆಗಂಗಮ್ಮನ ಪೂಜೆ ನೆರವೇರಿಸಿದರು.

ಐತಿಹಾಸಿಕ ತಿಪ್ಪೇರುದ್ರಸ್ವಾಮಿ ದೇವಾಲಯದ ಪಟ್ಟದ ಗೂಳಿಯನ್ನು ಅಲಂಕರಿಸಿ, ದೊಡ್ಡಕೆರೆಯ ಎರಡೂ ಬದಿ ನೀರು ಹರಿಯುವ ಬಳಿ ಹಾಗೂ ಕೆರೆಯ ಮುಂದೆ ಇರುವ ನಂದಿಕೋಲು ಬಾವಿಗೂ ಸಂಪ್ರದಾಯದಂತೆ ಗಂಗಮ್ಮನ ಪೂಜೆ ಮಾಡಲಾಯಿತು. ಕೆರೆಯ ಏರಿ ಮೇಲಿರುವ ಜೋಡಿ ಬಸವಣ್ಣನ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ ಮಾಡಿ 108 ಬಿಂದಿಗೆಗಳಿಂದ ಜಲಾಭಿಷೇಕ ನಡೆಸಲಾಯಿತು.

ಕಳೆದ ವಾರದಲ್ಲಿ ಮಳೆ ಬಂದು ಕೆರೆಗೆ ನೀರು ಬಂದಿತ್ತು. ಆ.21 ರಂದು 69.9 ಮಿ.ಮೀ ಮಳೆ ಸುರಿದು ಅರ್ಧ ಕರೆಗೆ ನೀರು ಬಂದಿರುವುದು ಭಕ್ತರ ಮನದಲ್ಲಿ ಸಂತಸ ಮೂಡುವಂತೆ ಮಾಡಿದೆ.

ಪೂಜೆ ಆಗಮಿಸಿದ್ದ ಭಕ್ತರಿಗೆ ಸಜ್ಜೆ ಕಡುಬು, ಪಾಯಸ, ಅನ್ನಪ್ರಸಾದ ವಿನಿಯೋಗ ನಡೆಯಿತು. ಮೆರವಣಿಗೆ ಮೂಲಕ ಬಂದು ನಾಯಕನಹಟ್ಟಿ ಪಟ್ಟಣಕ್ಕೆ ಹೊಂದಿಕೊಂಡಿರುವ ಚಿಕ್ಕಕೆರೆಯಲ್ಲಿ ಗಂಗಮ್ಮನ ಪೂಜೆ ಮಾಡಿದ ಭಕ್ತರು ಸಂಜೆ ದೇವಸ್ಥಾನಕ್ಕೆ ತೆರಳಿದರು.

ಕಾರ್ಯಕ್ರಮದಲ್ಲಿ ಗ್ರಾಮದ ದೈವಸ್ಥರಾದ ಕೆ.ಎನ್.ತಿಪ್ಪೇರುದ್ರಪ್ಪ, ಬಿ.ಜಿ.ರಾಜಶೇಖರಪ್ಪ, ಮಹಾಂತೇಶ ದಿವಾಕರ, ಜೆ.ಪಿ.ರವಿಶಂಕರ್, ಆರ್.ಟಿ.ತಿಪ್ಪೇಸ್ವಾಮಿ, ದಳವಾಯಿ ರುದ್ರಮುನಿ, ಎಸ್.ಸತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net