

ಗುಡಿಬಂಡೆ: ತಾಲೂಕಿನಾದ್ಯಂತ ಕಳೆದು ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಬೆಳೆಗಳು ಕೊಚ್ಚಿ ಹೋಗಿದ್ದು, ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದಾನೆ.
ತಾಲೂಕಿನಲ್ಲಿ ಈ ಬಾರಿ ಉತ್ತಮ ಮುಂಗಾರು ಮಳೆ ಆಗಿದ್ದರಿಂದ ಬಹುತೇಕ ರೈತರು ರಾಗಿ, ಜೋಳ, ಅಲಸಂದೆ, ಅವರೆ ಸೇರಿ ವಿವಿಧ ಬಿತ್ತನೆ ಕಾರ್ಯ ಮುಗಿಸಿದ್ದರು. ಆದರೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಸತತ ಮಳೆಗೆ ಭೂಮಿಯ ತೇವಾಂಶ ಹೆಚ್ಚಾಗಿ ಬಿತ್ತನೆ ಬೀಜಗಳು ಭೂಮಿಯಲ್ಲೆ ಕೊಳೆಯುತ್ತಿವೆ. ಮತ್ತೊಂದೆಡೆ ಮೊಳಕೆಯಾಗಿರುವ ಅನೇಕ ಬೆಳೆಗಳು ಮಳೆಗೆ ಕೊಚ್ಚಿ ಹೋಗಿ ಕೆರೆ, ಕುಂಟೆ ಮತ್ತು ಕಾಲುವೆ ಸೇರುತ್ತಿವೆ.
ನೆಲಕಚ್ಚಿದ ಹೂಕೋಸ್: ತಾಲೂಕಿನಲ್ಲಿ ಈ ಬಾರಿ ಹೂಕೋಸ್ ಬೆಳೆ ಇಳುವರಿ ಬಂದಿದ್ದು, ಇನ್ನೇನು ಹೂವು ಬರುವ ಸಮಯದಲ್ಲಿ ಹೆಚ್ಚು ಮಳೆ ಬಿದಿದ್ದರಿಂದ ಬೆಳೆಯಲ್ಲೆ ನೀರು ನಿಂತಿ ಹೆಚ್ಚಿನ ತೇವಾಂಶದಿಂದ ಬೆಳೆ ನಾಶವಾಗುತ್ತಿವೆ. ಹಾಕಿದ ಬಂಡವಾಳ ವಾಪಾಸ್ ಪಡೆಯಲಾಗದೆ ರೈತರು ಸಂಕಷ್ಟಪಡುವ ಸ್ಥಿತಿ ಎದುರಾಗಿದೆ.
ಕೊಚ್ಚಿ ಹೋದ ರಾಗಿ ಬೆಳೆ: ತಾಲೂಕಿನಾದ್ಯಾಂತ 15 ದಿನಗಳ ಹಿಂದೆ ರಾಗಿ ಬೆಳೆ ಬಿತ್ತನೆ ಮಾಡಲಾಗಿತ್ತು. ಹೆಚ್ಚು ಮಳೆಯಿಂದ ಬಿತ್ತನೆ ಮಾಡಿರುವ ರಾಗಿ ಬೆಳೆ ಕೆರೆ ಸೇರಿದ್ದು, ಮಳೆ ನಿಂತ ಮೇಲೆ ಮತ್ತೊಮ್ಮೆ ಬಿತ್ತನೆ ಮಾಡುವ ಪರಿಸ್ಥಿತಿ ಎದುರಾಗಿದೆ. ಮಳೆಗೆ ಜಮೀನುಗಳ ತುಂಬಾ ನೀರು ತುಂಬಿದ್ದು, ಕೆರೆ ಯಾವುದು ಜಮೀನು ಯಾವುದು ಎಂದು ಗುರುತು ಸಿಗದಂತಾಗಿದೆ. ಬೂಮಿಯಲ್ಲಿ ನಿರಂತರ ನೀರು ನಿಂತ ಪರಿಣಾಮ ಟೊಮ್ಯಾಟೊ, ಬಿನ್ಸ್ ಸೇರಿ ಅನೇಕ ಗಿಡಗಳು ಕೊಳೆಯುತ್ತಿವೆ. ಅತಿ ಹೆಚ್ಚು ಮಳೆಯಿಂದ ತಾಲೂಕಿನಲ್ಲಿ ಅನೇಕ ಬೆಳೆಗಳು ನಾಶವಾಗಿದ್ದು, ರೈತರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಸರ್ಕಾರ ರೈತರಿಗೆ ನೆರವಿಗೆ ಧಾವಿಸಿ ಪರಿಹಾರ ನೀಡುಬೇಕು ಎಂಬುದು ರೂತರ ಬೇಡಿಕೆಯಾಗಿದೆ.
ಸಾಲ ಮಾಡಿ ಹೂಕೋಸ್ ನಾಟಿ ಮಾಡಿದ್ದೇನೆ. ಉತ್ತಮ ಸಲು ಬಂದಿತ್ತು. ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂಬ ಭರವಸೆಯಲ್ಲಿದೆ. ಆದರೆ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಹೂಕೊಸ್ ಬೆಳೆ ಸಂಪೂರ್ಣ ನಾಶವಾಗಿದೆ. ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಬೇಕು.ಕೃಷ್ಣಪ್ಪ, ರೈತ ಗುಡಿಬಂಡೆ
ಮಳೆಗೆ ಹೆಚ್ಚು ಬೆಳೆ ಹಾನಿಯಾಗಿದೆಂದು ರೈತರು ತಿಳಿಸಿದ್ದು, ತಹಸೀಲ್ದಾರ್ ಅವರ ಅನುಮತಿ ಮೇರೆಗೆ ರೈತರ ಜಮೀನುಗಳಿಗೆ ಹೋಗಿ ಪರಿಶೀಲನೆ ನಡೆಸಲಾಗಿದೆ. ಬೆಳೆ ಹಾನಿಯ ಪೋಟೋ ತೆಗೆದುಕೊಂಡು ಪರಿಹಾರಕ್ಕೆ ಸರ್ಕಾರದ ಗಮನಕ್ಕೆ ತರಲಾಗುವುದು.ಲಕ್ಷ್ಮೀನಾರಾಯಣ, ಉಲ್ಲೋಡು ವೃತ್ತದ ರಾಜಸ್ವ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಾಧಿಕಾರಿ