

ನಾಯಕನಹಟ್ಟಿ: ಪಟ್ಟಣದ ವ್ಯಾಪ್ತಿಯಲ್ಲಿ 65.6 ಮಿಮೀ ಮಳೆಯಾಗಿದ್ದು, ಮಾಳಪ್ಪನಹಟ್ಟಿ ಸಮೀಪ ಅವೈಜ್ಞಾನಿಕವಾಗಿ ನಿರ್ಮಿಸಿದ ಚೆಕ್ ಡ್ಯಾಂನಲ್ಲಿ ನೀರು ನಿಲ್ಲದೆ ಹಳ್ಳದ ಪಾಲಾಗಿದೆ.
ಸಮೀಪದ ಎನ್.ದೇವರಹಳ್ಳಿ ಗ್ರಾಮದಲ್ಲಿನ ಎರಡು ಚೆಕ್ ಡ್ಯಾಂಗಳು ಭರ್ತಿಯಾಗಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗಿವೆ. ಶುಕ್ರವಾರದಿಂದ ರೋಹಿಣಿ ಮಳೆ ಆರಂಭವಾಗಿದೆ. ಈ ಮಳೆಯಲ್ಲಿ ಬಿತ್ತಿದರೆ ಓಣಿ ತುಂಬ ಜೋಳ ಎಂಬ ಗಾದೆಯಂತೆ ಆರಂಭದಲ್ಲಿಯೇ ರೋಹಿಣಿ ಮಳೆ ಅಬ್ಬರಿಸಿದೆ.
ಶುಕ್ರವಾರ ರಾತ್ರಿ ಸುತ್ತಲಿನ ಎನ್.ದೇವರಹಳ್ಳಿ, ಬೋಸೇದೇವರಹಟ್ಟಿ, ತಳಕು ಸೇರಿ ಸುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಎನ್.ದೇವರಹಳ್ಳಿ ಗ್ರಾಮದಲ್ಲಿನ ಕೆಲವೆಡೆ ಜನರ ಮನೆಗಳಿಗೆ ಹಳ್ಳದ ನೀರು ನುಗ್ಗಿದೆ. ಹೀಗಾಗಿ ನಿವಾಸಿಗಳು ಮನೆಯಿಂದ ನೀರು ಹೊರಹಾಕುವ ಕಾರ್ಯದಲ್ಲಿ ತೊಡಗಿದ್ದರು.
ಮಾಳಪ್ಪನಹಟ್ಟಿ ಸಮೀಪ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಚೆಕ್ ಡ್ಯಾಂನ ಹಿಂಭಾಗದಲ್ಲಿನ ರಿವೀಟ್‌ಮೆಂಟ್ ಕುಸಿತ ಉಂಟಾಗಿದೆ. ಹೀಗಾಗಿ ಚೆಕ್ ಡ್ಯಾಂ ತುಂಬಿ ಹೊರ ಹೋಗಬೇಕಾಗಿದ್ದ ನೀರು ಚೆಕ್ ಡ್ಯಾಂ ಹಿಂಭಾಗದಿಂದ ಹಳ್ಳ ಸೇರುತ್ತಿದೆ. ಇದರಿಂದ ಸುತ್ತಲಿನ ರೈತರಿಗೆ ತೀವ್ರ ನಿರಾಸೆಯಾಗಿದೆ. ಅಂತರ್ಜಲದ ಹೆಚ್ಚಳಕ್ಕೆ ಕಾರಣವಾಗಬೇಕಾಗಿದ್ದ ಚೆಕ್ ಡ್ಯಾಂನ ನೀರು ವ್ಯರ್ಥವಾಗಿ ಹಳ್ಳದಲ್ಲಿ ಹರಿಯುತ್ತಿದೆ.