ಕರಾವಳಿಗೆ ಥಂಡಿ ಹಿಡಿಸಿದ ಮಳೆ, ಮಳೆಗಾಲ ಆರಂಭ ಬಳಿಕ ಅಬ್ಬರ ಇದೇ ಮೊದಲು

maleee
Published on

ಮಂಗಳೂರು/ಉಡುಪಿ: ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇದುವರೆಗೂ ಅಷ್ಟಾಗಿ ಮಳೆಯಾಗಿರಲಿಲ್ಲ. ಆದರೆ ಗುರುವಾರದಿಂದ ಭಾರಿ ಮಳೆಯಾಗುತ್ತಿದ್ದು, ಶುಕ್ರವಾರವೂ ಮುಂದುವರಿದಿದೆ.

ಉಭಯ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿಲ್ಲ, ಬಿಟ್ಟುಬಿಟ್ಟು ಧಾರಾಕಾರವಾಗಿ ಸುರಿಯುತ್ತಿದೆ. ಶುಕ್ರವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮೋಡ-ಬಿಸಿಲಿನ ನಡುವೆ ಅಷ್ಟಾಗಿ ಮಳೆಯಾಗಿರಲಿಲ್ಲ. ಅಪರಾಹ್ನ ಮತ್ತೆ ಚುರುಕಾಗಿದೆ. ಜತೆಗೆ ಗಾಳಿಯೂ ವೇಗ ಪಡೆದಿತ್ತು.

ಭಾರಿ ಮಳೆಯಿಂದಾಗಿ ಉಭಯ ಜಿಲ್ಲೆಗಳ ಹಲವೆಡೆ ಗುಡ್ಡ ಕುಸಿತ ಸಂಭವಿಸಿದ್ದು, ಮನೆಗಳಿಗೂ ಹಾನಿಯಾಗಿದೆ. ರಸ್ತೆ ಕಾಮಗಾರಿಗಳಿಗಾಗಿ ಅಗೆದಿದ್ದ ಗುಡ್ಡಗಳು ಕುಸಿದಿದ್ದರಿಂದ ವಾಹನ ಸಂಚಾರಕ್ಕೂ ಅಡಚಣೆಯಾಗಿತ್ತು. ಕೆಲವೆಡೆ ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದವು. ಹವಾಮಾನ ಇಲಾಖೆ ಕರಾವಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಜುಲೈ 7ರವರೆಗೂ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.

ದಾಖಲೆ ಮಳೆ: ಶುಕ್ರವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ದ.ಕ. ಜಿಲ್ಲೆಯಲ್ಲಿ ಸರಾಸರಿ 100.6 ಮಿ.ಮೀ. ಮಳೆ ಸುರಿದಿದೆ. ಮುಂಗಾರು ಆರಂಭದ ಬಳಿಕ ಜಿಲ್ಲೆಯಲ್ಲಿ ಇಷ್ಟು ಪ್ರಮಾಣದಲ್ಲಿ ಮಳೆಯಾಗಿರುವುದು ಇದೇ ಮೊದಲು. ಬಂಟ್ವಾಳದಲ್ಲಿ ಅತೀ ಹೆಚ್ಚು 136.4 ಮಿ.ಮೀ, ಮಂಗಳೂರು 118, ಬೆಳ್ತಂಗಡಿ 93.6, ಪುತ್ತೂರು 82.4, ಸುಳ್ಯ 72.5 ಮಿ.ಮೀ. ಮಳೆ ಸುರಿದಿದೆ. ಶುಕ್ರವಾರ ಬೆಳಗ್ಗಿನಿಂದ ಸಾಯಂಕಾಲದ ವರೆಗೆ ಬಳ್ಕುಂಜೆ 59, ಅಡ್ಯಾರ್ 49, ಕೊಕ್ಕಡ 45 ಮಿ.ಮೀ. ಮಳೆ ಸುರಿದಿದೆ.

ಉಡುಪಿ 93, ಕುಂದಾಪುರ 62, ಕಾರ್ಕಳ 123 ಮಿ.ಮೀ. ಸಹಿತ ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಯಲ್ಲಿ 92 ಮಿ.ಮೀ ಸರಾಸರಿ ಮಳೆ ದಾಖಲಾಗಿದೆ.

ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ನೀರು: ಗುರುವಾರ ದಿನವಿಡೀ ಸುರಿದ ಮಳೆಗೆ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿದ್ದು, ಸುಮಾರು 6 ಯುನಿಟ್‌ಗಳಿಗೆ ನೀರು ನುಗ್ಗಿ ಅಪಾರ ನಷ್ಟವಾಗಿದೆ. ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಹಾದು ಹೋಗುವ ತೋಡಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ, ತಗ್ಗು ಪ್ರದೇಶದ ಕೈಗಾರಿಕಾ ಯುನಿಟ್‌ಗಳಿಗೆ ನೀರು ನುಗ್ಗಿದೆ. ತೋಡಿನ ಹೂಳು ತೆಗೆಯಲಾಗಿತ್ತಾದರೂ, ಮಳೆ ಹೆಚ್ಚಿದ್ದರಿಂದ ನೀರು ಪ್ರವಾಹೋಪಾದಿಯಲ್ಲಿ ಹರಿದು ಬಂದಿದೆ. ಶುಕ್ರವಾರ ಸಾಯಂಕಾಲ ಸುರಿದ ಮಳೆಗೆ ತೋಡಿನಲ್ಲಿ ನೀರು ಹೆಚ್ಚಾದರೂ, ಕೈಗಾರಿಕೆಗಳಿಗೆ ಸಮಸ್ಯೆಯಾಗಿಲ್ಲ. ಬೈಕಂಪಾಡಿಯಲ್ಲಿ ಪ್ರತಿವರ್ಷ ಮಳೆಗೆ ಕೃತಕ ನೆರೆಯುಂಟಾಗುವುದು ಸಾಮಾನ್ಯವಾಗಿದೆ.

ಮೂವರು ಯುವಕರು ನೀರುಪಾಲು, ಬಾರಕೂರಿನ ಇಬ್ಬರು, ಎಡಮಂಗಲದ ಓರ್ವ

ಬ್ರಹ್ಮಾವರ/ಕಡಬ: ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ಯುವಕರು ನೀರುಪಾಲಾಗಿದ್ದಾರೆ.

ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ಬಾರಕೂರು ಸೀತಾನದಿಯ ಹಾಲೇಕೊಡಿಯಲ್ಲಿ ಶುಕ್ರವಾರ ಮೀನು ಹಿಡಿಯಲು ಹೋಗಿದ್ದ ಖಾಸಗಿ ಸಂಸ್ಥೆ ಉದ್ಯೋಗಿ ಹೊಸಾಳ ಗ್ರಾಮದ ಹರ್ಷ(25) ಮತ್ತು ಬಾರಕೂರು ಸರ್ಕಾರಿ ಕಾಲೇಜಿನ ತೃತೀಯ ವರ್ಷದ ಬಿಕಾಂ ವಿದ್ಯಾರ್ಥಿ ಕಾರ್ತಿಕ್(21) ಮೃತಪಟ್ಟಿದ್ದಾರೆ. ಗುರುವಾರ ಸಾಯಂಕಾಲ ಬಲೆ ಬೀಸಿದ್ದು, ಶುಕ್ರವಾರ ಮುಂಜಾನೆ ಬಲೆ ಎಳೆಯಲು ಹೋದಾಗ ನೀರಿನಲ್ಲಿ ಬಿದ್ದು ಸಾವು ಸಂಭವಿಸಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸಾರ್ವಜನಿಕರು ನದಿಯಲ್ಲಿ ಹೂತು ಹೋದ ಶವಗಳನ್ನು ಮೇಲೆತ್ತುವಲ್ಲಿ ಶ್ರಮಿಸಿದರು. ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೌರಯ್ಯ, ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಸಿ. ಭೇಟಿ ನೀಡಿದರು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಘಟನೆ ದ.ಕ. ಜಿಲ್ಲೆಯ ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎಡಮಂಗಲ ಗ್ರಾಮದ ದೋಳ್ತಿಲ ಎಂಬಲ್ಲಿ ಗುರುವಾರ ರಾತ್ರಿ ಕುಮಾರಧಾರಾ ನದಿಗೆ ದೋಳ್ತಿಲ ನಿವಾಸಿ ರಾಮಣ್ಣ ನಾಯ್ಕರ ಪುತ್ರ ಪ್ರಕಾಶ್(25) ಆಕಸ್ಮಿಕವಾಗಿ ಬಿದ್ದು ಸಾವಿಗೀಡಾಗಿದ್ದು, ಶುಕ್ರವಾರ ಮೃತದೇಹ ಪತ್ತೆಯಾಗಿದೆ.

ಸ್ನೇಹಿತರೊಂದಿಗೆ ಗುರುವಾರ ಸಾಯಂಕಾಲ ತೆರಳಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲುಜಾರಿ ನದಿ ನೀರಿಗೆ ಬಿದ್ದಿದ್ದು, ಜತೆಗಿದ್ದವರು ರಕ್ಷಿಸಲು ಮುಂದಾದರೂ ಸಾಧ್ಯವಾಗಿರಲಿಲ್ಲ. ಶುಕ್ರವಾರ ಅಗ್ನಿಶಾಮಕ ದಳ ಶವ ಪತ್ತೆ ಹಚ್ಚಿದೆ. ಸ್ಥಳಕ್ಕೆ ಕಡಬ ತಹಸೀಲ್ದಾರ್ ಜಾನ್‌ಪ್ರಕಾಶ್ ರೋಡ್ರಿಗಸ್, ಬೆಳ್ಳಾರೆ ಠಾಣಾಧಿಕಾರಿ ಆಂಜನೇಯ ರೆಡ್ಡಿ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net