

ಕೊಂಡ್ಲಹಳ್ಳಿ: ನಿನ್ನೆ ಸ್ವಲ್ಪ ಮಳೆ ಆಯ್ತು, ಇದೇ ಶೇಂಗಾ ಬಿತ್ತೋಕೆ ಒಳ್ಳೆ ಟೈಮ್, ಈ ಹಸಿಗೆ ಬಿತ್ತನೆ ಮಾಡಿದ ಕಾಳು ಹುಟ್ಟಿದರೆ, ಮುಂದೆ ಒಂದು ಒಳ್ಳೆ ಮಳೇನಾ ದೇವರು ಕೊಡಬಹುದೇನೋ ಎಂಬ ಭರವಸೆಯಿಂದ ಬಿತ್ತೋಕೆ ಬಂದು ಬಿಟ್ಟಿದೀವಿ…
ಇದುವರೆಗೆ ಕಾದರೂ ಒಂದು ಹದ ಮಳೆಯಾಗದೆ ಇತ್ತೀಚೆಗೆ ಸುರಿದ ಸಣ್ಣ ಸೋನೆ ಮಳೆಗೆ ಶೇಂಗಾ ಬಿತ್ತನೆಗೆ ಮುಂದಾಗಿರುವ ಮೊಗಲಹಳ್ಳಿಯ ರೈತ ಮಹಿಳೆ ತಿಮ್ಮಕ್ಕ ಅವರ ಮಾತಿದು…
ಸಾಮಾನ್ಯವಾಗಿ ಕಿರೇ ಪುಸ್ಯ, ಹಿರೇ ಪುಸ್ಯ ಮಳೆಗೆ ಶೇಂಗಾ ಬಿತ್ತನೆ ಮಾಡುವುದು ವಾಡಿಕೆ. ಪ್ರಸ್ತುತ ಬಿತ್ತನೆಗೆ ಸೂಕ್ತ ಸಮಯ. ಹೀಗಾಗಿ ಮಳೆ ಕೊರತೆಯ ನಡುವೆಯೂ ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ.
ಮೊಗಲಹಳ್ಳಿ, ರಾವಲಕುಂಟೆ ಗ್ರಾಮಗಳ ಜಮೀನುಗಳಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿರುವುದು ಕಂಡು ಬರುತ್ತಿದೆ.
ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಸೋನೆ ನಾಲ್ಕು ಹನಿ ಬೀಳುತ್ತಿದ್ದಂತೆ ಗಾಳಿಗೆ ಮೋಡಗಳು ಮುಂದಕ್ಕೆ ಸಾಗುತ್ತವೆ. ಭೂಮಿ ಹಸನು ಮಾಡಿಕೊಂಡು ಬಿತ್ತನೆಗೆ ಒಂದು ಹದ ಮಳೆಗೆ ಕಾಯುತ್ತಿದ್ದ ರೈತರು ನಿರಾಶರಾಗಿದ್ದಾರೆ.
ಹೊಲಗಳಿಗೆ ಹೋಗಿ ತೇವ ಆಗಿದೆಯೋ ಇಲ್ಲವೋ ಎಂದು ನೋಡಿಕೊಂಡು ಬರುವುದೇ ರೈತರಿಗೆ ಕೆಲಸವಾಗಿತ್ತು. ಆಗಸದ ಕಡೆಗೆ ನೋಡಿ ನೋಡಿ ಸಾಕಾಗಿ ಈಗ ಏನಾದರೂ ಆಗಲಿ ಎಂದು ಬಿತ್ತನೆಗೆ ಮುಂದಾಗಿದ್ದಾರೆ.
‘ಹೋದ ವರ್ಷ ಪೂರ್ತಿ ಲಾಸ್ ಆಯ್ತು, ಜಡಿ ಮಳೆ ಬರ‌್ತಾಐತೆ, ಬೀಜ ಮೊಳಕೆ ಯೊಡೆಯಬಹುದು ಎಂದು ದೇವರ ಮೇಲೆ ಭಾರ ಹಾಕಿ ಮುಂದೆ ಮಳೆ ಚೆನ್ನಾಗಿ ಬಂದು ಬೆಳೆ ಆಗಬಹುದು ಎಂದು ಬಿತ್ತುತ್ತಿದ್ದೇವೆ. ನಮ್ಮ 12 ಎಕರೆ ಹೊಲ ಬಿತ್ತೋಕೆ ಕ್ವಿಂಟಾಲಿಗೆ 11,500 ರೂ. ಬಿತ್ತನೆ ಬೀಜ, ಉಳುಮೆ ಇತರ ಖರ್ಚು ಸೇರಿ 1 ಲಕ್ಷ ರೂ. ಖರ್ಚಾಗುತ್ತೆ. ಏನ್ಮಾಡೋದು ಜಮೀನು ಐತೆ, ಬೀಳು ಬಿಡೋಕೆ ಆಗೋದಿಲ್ಲ ಎನ್ನುವುದು ಬಿತ್ತನೆಯಲ್ಲಿ ತೊಡಗಿದ್ದ ಹನುಮಂತಪ್ಪ ಮಾತು.