

ಸಿಂಧನೂರು: ತಾಲೂಕಿನಲ್ಲಿ ಶುಕ್ರವಾರ ಹಾಗೂ ಶನಿವಾರ ಸುರಿದ ಮಳೆಯಿಂದ ಕಟಾವಿಗೆ ಬಂದಿದ್ದ ಭತ್ತದ ಫಸಲು ನೆಲಕ್ಕೆ ಬಾಗಿದ್ದು, ರೈತರಿಗೆ ನಷ್ಟದ ಭೀತಿ ಎದುರಾಗಿದೆ. ಇನ್ನು ಒಣಗಲು ಹಾಕಿದ ಭತ್ತ ಮಳೆ ನೀರಿನಿಂದ ತೊಯ್ದಿದ್ದು ದರ ಕುಸಿಯುವ ಆತಂಕ ಮೂಡಿದೆ.
ತಾಲೂಕಿನಲ್ಲಿ ಈಗಾಗಲೇ ಬಹುತೇಕ ಭತ್ತ ಕಟಾವು ಮುಗಿದಿದೆ. ಆದರೆ, ಭತ್ತ ಸಂಪೂರ್ಣವಾಗಿ ಒಣಗಲು ಕಾಲಾವಕಾಶ ಬೇಕಾಗಿದೆ. ಮಳೆ ಬರುತ್ತಿರುವುದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ತಿಡಿಗೋಳ, ಗುಂಜಳ್ಳಿ, ತುರ್ವಿಹಾಳ, ಪಗಡದಿನ್ನಿ, ಕುರುಕುಂದ, ಬೊಮ್ಮನಾಳ, ದೇವಿಕ್ಯಾಂಪ್, ಕೆ.ಹೊಸಳ್ಳಿ, ಜಾಲಿಹಾಳ, ಗಾಂಧಿನಗರ, ಗೊರೇಬಾಳ, ರೌಡಕುಂದ, ಜವಳಗೇರಾ ಸೇರಿ ವಿವಿಧೆಡೆ ಒಣಗಲು ಹಾಕಿದ್ದ ಭತ್ತದ ರಾಶಿಗೆ ಮಳೆ ನೀರು ನುಗ್ಗಿದೆ.
ಒಂದು ವಾರ ಕಳೆದಿದ್ದರೆ ಬಹುತೇಕ ರೈತರು ಭತ್ತ ಮಾರಾಟ ಮಾಡಿಕೊಳ್ಳುತ್ತಿದ್ದರು. ಭತ್ತದ ರಾಶಿ ಮಾಡುವ ಸಂದರ್ಭದಲ್ಲಿಯೇ ಮಳೆ ಬಂದಿದ್ದು ಸಮಸ್ಯೆಗೆ ಕಾರಣವಾಗಿದೆ. ವಾತಾವರಣದಿಂದ ಮಾರುಕಟ್ಟೆಯಲ್ಲಿ ಭತ್ತದ ದರವು 100 ರೂ. ಕಡಿಮೆಯಾಗಿದೆ. ಮಳೆ ಮುಂದುವರಿದರೆ ರೈತರ ಬದುಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ರೈತರು ಅಳಲು ತೋಡಿಕೊಂಡರು.