ತರೀಕೆರೆಯಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ

web 3
Published on

ತರೀಕೆರೆ: ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸೋಮವಾರ ಸಂಜೆ ಗಾಳಿ, ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದೆ.

ಸಿದ್ದರಹಳ್ಳಿ, ಸೀತಾಪುರ ಕಾವಲ್, ಚಿಕ್ಕಾತ್ತೂರು, ಯಲುಗೆರೆ ಮತ್ತಿತರೆಡೆ ಸೋಮವಾರ ಸಂಜೆ 5 ಗಂಟೆಗೆ ಆರಂಭವಾದ ಮಳೆ ಅರ್ಧ ತಾಸಿಗೂ ಹೆಚ್ಚು ಕಾಲ ಸುರಿಯಿತು. ಗಾಳಿ ಆರ್ಭಟಕ್ಕೆ ಖಾಸಗಿ ಬಸ್​ನಿಲ್ದಾಣದ ಶೀಟ್​ಗಳು ಹಾರಿ ಹೋಗಿವೆ. ಮಹಾತ್ಮ ಗಾಂಧಿ ಉದ್ಯಾನದ ಎದುರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಮರವೊಂದು ಧರೆಗುರುಳಿದೆ. ಬಯಲು ರಂಗ ಮಂದಿರದ ಸಮೀಪ ಕಾರಿನ ಮೇಲೆ ಮರ ಬಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ. ಸಿದ್ದರಹಳ್ಳಿಯಲ್ಲಿ ಮನೆ ಆವರಣದಲ್ಲಿದ್ದ ಹಲಸು, ಮಾವಿನ ಮರಗಳು ಮುರಿದು ಬಿದ್ದಿವೆ. ಬಿ.ಎಚ್.ರಸ್ತೆ ಪಕ್ಕದಲ್ಲಿರುವ ಅನೇಕ ಅಂಗಡಿಗಳ ನಾಮಫಲಕ ಕಿತ್ತು ಹೋಗಿವೆ. ಜಂಬದಹಳ್ಳ, ದುಗ್ಲಾಪುರ, ಅತ್ತಿಗನಾಳು, ನಂದಿ ಮುಂತಾದ ಕಡೆ ವಿದ್ಯುತ್ ಕಂಬಗಳು ಮುರಿದುಬಿದ್ದು ವಿದ್ಯುತ್ ಕಡಿತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net