ಬಸವಣ್ಣನಿಗೆ 108 ಬಿಂದಿಗೆ ಗಂಗಾಭಿಷೇಕ

dj nyk basavanna
Published on

ನಾಯಕನಹಟ್ಟಿ: ಮಳೆಗಾಗಿ ಸಮೀಪದ ಮಾದಯ್ಯನಹಟ್ಟಿ ಬಳಿ ಇರುವ ಕಾವಲು ಬಸವೇಶ್ವರ ಸ್ವಾಮಿಗೆ ಗುರುವಾರ ವಿಶೇಷ ಪೂಜೆ ಹಾಗೂ 108 ಬಿಂದಿಗೆ ನೀರಿನಿಂದ ಗಂಗಾಭೀಷೇಕ ನೆರವೇರಿಸಲಾಯಿತು.

ಶ್ರಾವಣ ಮಾಸದಲ್ಲಿ ಪಟ್ಟಣದ ಗುರು ತಿಪ್ಪೇರುದ್ರಸ್ವಾಮಿ ಒಳಮಠ ದೇವಾಲಯದಿಂದ ಪಟ್ಟದ ಅಲಂಕೃತ ಬಸವಣ್ಣನನ್ನು ದೇಗುಲದ ಧಾರ್ಮಿಕ ವಿಧಿ ವಿಧಾನಗಳಂತೆ ನಂದಿ ಧ್ವಜ, ಪಂಜು, ಮಂಗಳ ವಾದ್ಯಗಳೊಂದಿಗೆ ಮಾದಯ್ಯನಹಟ್ಟಿ ಬಳಿಯಲ್ಲಿನ ಕಾವಲು ಬಸವೇಶ್ವರ ದೇವಾಲಯಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ಬಯಲು ಮಂಟಪದಲ್ಲಿನ ಬಸವಣ್ಣನ ಮೂರ್ತಿಗೆ 108 ಅಭಿಷೇಕಗಳನ್ನು ಸಲ್ಲಿಸಲಾಯಿತು. 108 ಬಿಂದಿಗೆ ನೀರಿನಿಂದ ನಂದಿ ಪ್ರತಿಮೆಗೆ ಅಭಿಷೇಕ ಮಾಡಲಾಯಿತು.

ಪೂಜಾ ಕಾರ್ಯದ ನಂತರ ನೆರೆದಿದ್ದ ನೂರಾರು ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಜಾನಪದ ವಾದ್ಯಗಳು, ನಂದಿಧ್ವಜ ಕುಣಿತದೊಂದಿಗೆ ಪಟ್ಟದ ಬಸವಣ್ಣನನ್ನು ಮೆರವಣಿಗೆಯಲ್ಲಿ ಒಳಮಠಕ್ಕೆ ಕರೆತರಲಾಯಿತು.

ಅರ್ಚಕ ಹಿರೇಮಠದ ಬಸವರಾಜ್, ಜಂಗಮಜ್ಯೋತಿ ತಿಪ್ಪೇಸ್ವಾಮಿ, ಪಪಂ ಮಾಜಿ ಸದಸ್ಯ ಬಸಣ್ಣ, ತಿಪ್ಪೇಸ್ವಾಮಿ, ಸ್ಥಳೀಯ ಜನಪ್ರತಿನಿಧಿಗಳು, ಮಾದಯ್ಯನಹಟ್ಟಿ, ಕಾವಲು ಬಸವೇಶ್ವರ ನಗರ, ಕನ್ನಯ್ಯನಹಟ್ಟಿ, ನಾಯಕನಹಟ್ಟಿ, ಜಾಗನೂರಹಟ್ಟಿ ಗ್ರಾಮಗಳ ನೂರಾರು ಭಕ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net