ಇಳೆಗೆ ಮಳೆ, ಬಿತ್ತನೆಗೆ ರೈತ ಅಣಿ

23ATHANIGRAMIN1
Published on

ಮೋಹನ ಪಾಟಣಕರ ಅಥಣಿ ಗ್ರಾಮೀಣ

ಮುಂಗಾರು ಪೂರ್ವ ಮಳೆ ಅಥಣಿ ತಾಲೂಕಿನಾದ್ಯಂತ ಭರದಿಂದ ಸುರಿಯುತ್ತಿದ್ದು, ರೈತರ ಮೊಗದಲ್ಲಿ ಹರ್ಷ ತಂದಿದೆ. ಇದರಿಂದ ಮುಂಗಾರು ಬಿತ್ತನೆಗೆ ರೈತರು ಸಿದ್ಧತೆ ನಡೆಸಿದ್ದು, ಭೂಮಿ ಹದಗೊಳಿಸುವುದರ ಜತೆಗೆ ಕೃಷಿ ಪರಿಕರಗಳಾದ ಕುಂಟೆ, ಪಲಗಾ, ಕೂರಿಗೆ ನೊಗ, ಬುಕ್ಕಾ ಸಿದ್ಧಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಜತೆಗೆ ಬಡಿಗ ಹಾಗೂ ಕಮ್ಮಾರರ ಬಳಿ ತಮ್ಮ ಪರಿಕರಗಳ ದುರಸ್ತಿ ಮಾಡಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ.

ಭೂಮಿ ಉಳುಲು ಎತ್ತು ಹಾಗೂ ಟ್ರಾೃಕ್ಟರ್‌ಗಳ ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ಎಕರೆ ಟ್ರಾೃಕ್ಟರ್ ಉಳುಮೆಗೆ 3,000 ರೂ. ಇದ್ದರೆ, ಎತ್ತುಗಳ ಉಳುಮೆಗೆ ದಿನಕ್ಕೆ 4 ಸಾವಿರ ರೂ. ಬೇಡಿಕೆ ಇದೆ ಕಂಡುಬಂದಿದೆ.

ಬಿತ್ತನೆ ಗುರಿ: ಅಥಣಿ ತಾಲೂಕಿನಲ್ಲಿ ಈ ಬಾರಿ ತೊಗರಿ 12,838, ಶೇಂಗಾ 12,3434, ಹೆಸರು 542.41, ಸೊಯಾಬಿನ್ 956.43, ಹುರಳಿ 48.04, ಉದ್ದು 20423.71, ಮೆಕ್ಕೆಜೋಳ 35233.12, ಸಜ್ಜೆ 650.65, ಕಬ್ಬು 42765.11 ಹೆಕ್ಟೇರ್ ಸೇರಿ ಒಟ್ಟು 1,14,692.08 ಹೆಕ್ಟೇರ್ ಪ್ರದೇಶ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ.

ಬಿತ್ತನೆ ಬೀಜ ಸಂಗ್ರಹ:ಅಥಣಿ ತಾಲೂಕಿನಲ್ಲಿ ಬಿತ್ತನೆಗಾಗಿ ಮೆಕ್ಕೆಜೋಳ 1320, ಸೋಯಾಅವರೆ 510, ಹೆಸರು 20, ತೊಗರಿ 1,050, ಉದ್ದು  420.5, ಶೇಂಗಾ 50 ಕ್ವಿಂಟಲ್ ಸೇರಿ ಒಟ್ಟು 3,370.5 ಕ್ವಿಂಟಲ್ ಬಿತ್ತನೆ ಬೀಜಗಳ ದಾಸ್ತಾನು ಇದೆ. ಬೀಜ ವಿತರಣೆಗೆ 4 ರೈತ ಸಂಪರ್ಕ ಕೇಂದ್ರಗಳೊಂದಿಗೆ 12 ಹೆಚ್ಚುವರಿ ಬೀಜ ವಿತರಣಾ ಕೇಂದ್ರ ತೆರೆಯಲಾಗಿದೆ.

ಅಥಣಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ತಾಲೂಕಿನ ಎಲ್ಲ ಬೀಜ ವಿತರಣಾ ಕೇಂದ್ರದಲ್ಲಿ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ಬೀಜ ವಿತರಕರು ರೈತರಿಂದ ಹೆಚ್ಚಿಗೆ ಹಣ ಪಡೆದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಂಗನಗೌಡ ಬಿರಾದಾರ ಸಹಾಯಕ ಕೃಷಿ ನಿರ್ದೇಶಕ, ಅಥಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net