ಮಳೆ ಅಲ್ಪ ಕಡಿಮೆಯಾಗುವ ಮುನ್ಸೂಚನೆ

Honnavar resque centere
Published on

ಕಾರವಾರ: ಭಾರಿ ಮಳೆಯಿಂದ ಉತ್ತರ ಕನ್ನಡ ಕರಾವಳಿ ತತ್ತರಿಸಿದೆ. ನೆರೆಯ ಪರಿಸ್ಥಿತಿ ಉಂಟಾಗಿದೆ. ದೇವಸ್ಥಾನ, ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ನೀರು ನಿಂತು ಓಡಾಟಕ್ಕೆ ಸಮಸ್ಯೆಯಾಗಿದೆ.

ಶರಾವತಿ ಜಲವಿದ್ಯುತ್ ಯೋಜನೆಯ ಲಿಂಗನಮಕ್ಕಿ ಅಣೆಕಟ್ಟೆಯಿಂದ ನಿರಂತರವಾಗಿ ನೀರು ಬಿಡಲಾಗುತ್ತಿದ್ದು, ಯೋಜನೆಯ ಎರಡನೇ ಅಣೆಕಟ್ಟೆ ಗೇರುಸೊಪ್ಪಾದಿಂದ ಗುರುವಾರ ಕ್ರಸ್ಟ್ ಗೇಟ್ ತೆರೆದು ಹಾಗೂ ವಿದ್ಯುತ್ ಉತ್ಪಾದನೆ ಮಾಡಿ 75 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿತ್ತು. ಶುಕ್ರವಾರ ನೀರು ಹೊರಬಿಡುವ ಪ್ರಮಾಣವನ್ನು 88500 ಕ್ಯೂಸೆಕ್‌ಗೆ ಏರಿಸಲಾಯಿತು. ಪರಿಣಾಮ ಹಲವೆಡೆ ನೀರು ತುಂಬಿದ್ದು, 15 ಕಾಳಜಿ ಕೇಂದ್ರಗಳನ್ನು ತೆರೆದು, 129 ಕುಟುಂಬಗಳ 368 ಜನರನ್ನು ರಕ್ಷಿಸಲಾಗಿದೆ. ಕಾರವಾರದಲ್ಲಿ ಕೋಡಿಬಾಗದ ವಿಜಯ ಪಾಲೇಕರ್ ಎಂಬುವವರ ಮನೆಯ ಗೋಡೆ ಕುಸಿತ ಉಂಟಾಯಿತು. ರಸ್ತೆ, ಎನ್‌ಡಬ್ಲುಕೆಆರ್‌ಟಿಸಿ ಡಿಪೋದಲ್ಲಿ ನೀರು ತುಂಬಿಕೊಂಡಿತ್ತು.

ಕೊನೆಯ ಕ್ಷಣದಲ್ಲಿ ನಿರ್ಧಾರ ಸಮಸ್ಯೆ

ಗುರುವಾರ ರೆಡ್ ಅಲರ್ಟ್ ಇದ್ದ ಕಾರಣ ಅಂಗನವಾಡಿ, ಶಾಲೆ, ಪಿಯು ಕಾಲೇಜ್‌ಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ, ಕರಾವಳಿಯಲ್ಲಿ ಅಷ್ಟೇನೂ ಮಳೆಯಾಗಲಿಲ್ಲ. ಶುಕ್ರವಾರ ಕೂಡ ರೆಡ್ ಅಲರ್ಟ್ ಇದ್ದರೂ ಶಾಲೆ, ಕಾಲೇಜ್‌ಗಳಿಗೆ ರಜೆ ಘೋಷಣೆ ಮಾಡಿರಲಿಲ್ಲ. ಆದರೆ, ಶುಕ್ರವಾರ ಬೆಳಗಿನ ಮಳೆಯ ಆರ್ಭಟ ನೋಡಿ ಶಿಕ್ಷಣ ಅಧಿಕಾರಿಗಳು ಎಚ್ಚೆತ್ತಿದ್ದು, ಬೆಳಗ್ಗೆ ಕರಾವಳಿಯ ಎಲ್ಲ ತಾಲೂಕುಗಳ ಬಿಇಒಗಳು ರಜೆಯ ಸಂದೇಶವನ್ನು ಕಳಿಸಿದ್ದಾರೆ. ಆದರೆ, ಕೆಲವು ಮಕ್ಕಳು ಆಗಲೇ ಶಾಲೆಗೆ ಹೊರಟಾಗಿತ್ತು. ಇದರಿಂದ ಸಮಸ್ಯೆ ಅನುಭವಿಸಬೇಕಾಯಿತು.

ಮಳೆಯ ಪ್ರಮಾಣ

ಶುಕ್ರವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳಲ್ಲಿ 35 ಮಿಮೀ ಮಳೆಯಾಗಿದೆ. ಅಂಕೋಲಾದಲ್ಲಿ -31.3, ಭಟ್ಕಳ-146.9, ಹಳಿಯಾಳ -1.8, ಹೊನ್ನಾವರ -113.4, ಕಾರವಾರ -25.2, ಕುಮಟಾ- 80.2, ಮುಂಡಗೋಡ -4.4, ಸಿದ್ದಾಪುರ- 59.4, ಶಿರಸಿ -32.1, ಜೊಯಿಡಾ- 10.9, ಯಲ್ಲಾಪುರ -8.8, ದಾಂಡೇಲಿ- 2.7, ಮಿಲಿ ಮೀಟರ್ ಮಳೆ ಸುರಿದಿದೆ. ಭಟ್ಕಳ ಕಾಯ್ಕಿಣಿಯಲ್ಲಿ 170, ಮಾರುಕೇರಿ-165.5, ಕೊಪ್ಪ-156.5, ಬೆಂಗ್ರೆ-142, ಹೊನ್ನಾವರ ಸಾಲ್ಕೋಡು-144.5, ಹೊಸಾಕುಳಿ-135, ಹಳದೀಪುರ-132, ಹೇರಂಗಡಿ-130.5, ಸಿದ್ದಾಪುರ ನಿಲ್ಕುಂದ-121.5 ಮಿಮೀ ಮಳೆಯಾಗಿದೆ.

ಅಲ್ಪ ಕಡಿಮೆ ನಿರೀಕ್ಷೆ

ಆ.30 ರಿಂದ ಮಳೆ ಕೊಂಚ ಕಡಿಮೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಆ.30 ರಂದು ಆರೇಂಜ್ ಅಲರ್ಟ್ ಇದ್ದು, ಆ31 ಹಾಗೂ ಸೆ.1 ರಂದು ಯೆಲ್ಲೋ ಅಲರ್ಟ್ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net