ಒಡ್ಡು ಒಡೆದು ಗದ್ದೆಗಳಿಗೆ ಹಾನಿ: ರಾಶಿ ರಾಶಿ ಮರಳು ಸಂಗ್ರಹ ಬಿತ್ತಿದ ಬೀಜ ನೀರುಪಾಲು

paddy
Published on

ಕೊಕ್ಕರ್ಣೆ:ಈ ವರ್ಷ ಮುಂಗಾರು ವಿಳಂಬವಾದಾಗ ರೈತರು ಮಳೆ ಬಂದಿಲ್ಲ, ಬೇಸಾಯಕ್ಕೆ ನೀರು ಇಲ್ಲ ಎನ್ನುವ ಚಿಂತೆಯಲ್ಲಿದ್ದರು.ಆದರೆ ತಡವಾಗಿ ಬಂದ ಮಳೆ ಸುಮಾರು ಒಂದು ತಿಂಗಳಿಂದ ನಿರಂತರವಾಗಿ ಸುರಿಯುತ್ತಿರುವುದರಿಂದ ನಾಲ್ಕೂರು ಗ್ರಾಮದ ಮಾರಾಳಿಯಲ್ಲಿ ತೋಡಿನ ಒಡ್ಡು ಒಡೆದು ಅಪಾರ ಹಾನಿಯಾಗಿದೆ.

ಬ್ರಹ್ಮಾವರ ತಾಲೂಕಿನ ಮಾರಾಳಿ,ಮಿಯ್ಯರು,ಅರ್ಬಿ,ನೆಂಚಾರು,ಹೊರ್ಲಾಳಿ,ನುಕ್ಕೂರು ಈ ಭಾಗಗಳಲ್ಲಿ ವಿಪರೀತ ಮಳೆಯಿಂದಾಗಿ ರೈತರಿಗೆ ಅಪಾರ ನಷ್ಟ ಉಂಟಾಗಿದೆ.ಇದರಿಂದಾಗಿ ಗದ್ದೆಗಳು ಈ ವರ್ಷ ಹಡೀಲು ಬೀಳುವಂತಾಗಿದೆ.ಗದ್ದೆಯಲ್ಲಿ ಅಪಾರ ಪ್ರಮಾಣದ ಮರಳು,ಕಸ ಕಡ್ಡಿ,ಪ್ಲಾಸ್ಟಿಕ್ ಮುಂತಾದ ತ್ಯಾಜ್ಯ ಸೇರಿಕೊಂಡಿದೆ.ಗದ್ದೆಗಳ ಅಂಚು ಒಡೆದು ನಾಟಿ ಮಾಡಿದ ಬೀಜ ಕೊಚ್ಚಿಕೊಂಡು ಹೋಗಿದೆ.ಮೊಳಕೆ ಒಡೆದ ನೇಜಿ ಕೊಳೆತು ಹೋಗಿದೆ.

ಮಾರಾಳಿ ವೆಂಕಟರಮಣ ಗಾಣಿಗ, ಮೋಹನದಾಸ ಶೆಟ್ಟಿ, ಶೇಖರ ಶೆಟ್ಟಿ ಬಗಲಾಡಿ, ಗೋಪಾಲ ಹಾಂಡ, ಕೃಷ್ಣ ಪೂಜಾರಿ, ರಾಜೀವ ಶೆಟ್ಟಿ, ಕುಶಲ ಶೆಟ್ಟಿ ಮುಂತಾದವರ ಗದ್ದೆಗಳಿಗೆ ಒಡ್ಡು ಒಡೆದ ಪರಿಣಾಮ ನೀರು ನುಗ್ಗಿ ನೇಜಿ ನಾಶವಾಗಿದೆ. ತೋಡು ಉಕ್ಕಿ ಹರಿದ ಪರಿಣಾಮ ಗದ್ದೆಯಲ್ಲಿ ವಿಪರೀತ ಮರಳು ಸಂಗಹ್ರವಾಗಿದೆ.ಮುಂದೆ ನಾಟಿ ಮಾಡಬೇಕಾದರೆ ಮಣ್ಣ ಮಿಶ್ರಿತ ಮರಳನ್ನು ತೆರವುಗೊಳಿಸಬೇಕು.ಇದು ಸುಲಭದ ಕೆಲಸವಲ್ಲ.

ಬಿತ್ತನೆ ಬೀಜ ದಾಸ್ತಾನು ಇಲ್ಲ: ಕೃಷಿ ಇಲಾಖೆಯ ನಿಯಮಾನುಸಾರ ವರ್ಷದಲ್ಲಿ ಒಮ್ಮೆ ಮಾತ್ರ ಬಿತ್ತನೆ ಬೀಜ ಪಡೆಯಲು ಅವಕಾಶವಿದೆ.ಈಗ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇಲ್ಲ.ಅದನ್ನು ತಂದು ಗದ್ದೆ ಹದ ಮಾಡಿ ಬಿತ್ತಿ ಮುಗಿಸುವಷ್ಟರಲ್ಲಿ ಮಳೆಗಾಲ ಮುಗಿದು ಹೋಗುತ್ತದೆ.ಹೀಗಾಗಿ ಕೆಲವು ರೈತರು ಈ ವರ್ಷ ಕೃಷಿ ಮಾಡದಿರಲು ನಿರ್ಧರಿಸಿದ್ದಾರೆ.

ಮಳೆಯಿಂದ ಹಾನಿಯಾದ ಕುರಿತು ದಾಖಲೆಗಳನ್ನು ಗ್ರಾಮಲೆಕ್ಕಿಗರು ಮತ್ತು ಪಿ.ಆರ್.ಡಿ.ಇಂಜಿನೀಯರ್‌ಗೆ ನೀಡಿದರೆ ಅವರು ನಷ್ಟದ ಅಂದಾಜು ಮಾಡುವರು.ಅದರೊಂದಿಗೆ ರೈತರು ಅರ್ಜಿ ಜತೆ ತಮ್ಮ ಆಧಾರ್ ಕಾರ್ಡ್,ಹಾನಿಯಾದ ಗದ್ದೆಯ ಫೋಟೋ,ಬ್ಯಾಂಕ್ ಪಾಸ್ ಪುಸ್ತಕ,ಆರ್.ಟಿ.ಸಿ. ನೀಡಿದರೆ ಪರಿಶೀಲಿಸಿ ಪರಿಹಾರ ನೀಡಲಾಗುವುದು.

- ಸುರೇಶ್ ಬಂಗೇರ, ಸಹಾಯಕ ಕೃಷಿ ಅಧಿಕಾರಿ ಬ್ರಹ್ಮಾವರ

ಅತಿವೃಷ್ಟಿಯಿಂದ ಹಾನಿಗೀಡಾದ ಗದ್ದೆಗಳಿಗೆ ಪರಿಹಾರ ನೀಡುವ ಕುರಿತು ಸರಿಯಾದ ಮಾಹಿತಿ ಲಭ್ಯವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕಷ್ಟನಷ್ಟಗಳ ನಡುವೆಯೂ ಬಿತ್ತನೆ ಮಾಡಿದ್ದೆವು.ಎಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿದೆ.ಗದ್ದೆಯಲ್ಲಿ ಸೇರಿಕೊಂಡ ಅಪಾರ ಪ್ರಮಾಣದ ಮರಳು ಕಸಕಡ್ಡಿಗಳನ್ನು ತೆರವುಗೊಳಿಸಲು ಸಂಬಂಧಪಟ್ಟವರು ನೆರವಾಗಬೇಕಿದೆ.

-ಮೋಹನದಾಸ ಶೆಟ್ಟಿ ಮಾರಾಳಿ, ಹಿರಿಯ ಕೃಷಿಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net