

ಅಳವಂಡಿ: ಮಳೆಗಾಗಿ ಪ್ರಾರ್ಥಿಸಿ ಸಮೀಪದ ಮುರ್ಲಾಪುರ ಗ್ರಾಮಸ್ಥರು ಗ್ರಾಮ ದೇವತೆ ಶ್ರಿದೇವಿ ಮಠದಲ್ಲಿ ಒಂದು ವಾರ ನಿರಂತರ ಸಪ್ತಭಜನೆ ಕಾರ್ಯಕ್ರಮ ಆಯೋಜಿಸಿದ್ದಾರೆ.
ಇದನ್ನೂ ಓದಿ: ಜೀವಸಮಾಧಿ ಶತಮಾನೋತ್ಸವ ವಿಧ್ಯುಕ್ತ ಚಾಲನೆ
ಅಳವಂಡಿ ವಲಯದಲ್ಲಿ ಪ್ರಸಕ್ತ ವರ್ಷ ಮುಂಗಾರು ಮಳೆ ಬಿತ್ತನೆ ಸಮಯದಲ್ಲಿ ಆಗಿದ್ದರಿಂದ ರೈತರು ಖುಷಿಯಿಂದ ಸಾವಿರಾರು ರೂ. ಖರ್ಚು ಮಾಡಿ ಭೂತಾಯಿ ಮಡಿಲಿಗೆ ಬೀಜ ಬಿತ್ತಿ ಉತ್ತಮ ಫಸಲಿನ ನೀರಿಕ್ಷೆಯಲ್ಲಿದ್ದರು.
ಆದರೆ, ಬಿತ್ತನೆ ನಂತರ ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಬಾಡಿ ರೈತರಿಗೆ ಹಾನಿ ಉಂಟು ಮಾಡಿತು. ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದರೆ ಬಿತ್ತಿದ ಬೆಳೆ ರೈತರ ಕೈಗೆ ಸಿಗಲಿದೆ ಹಾಗೂ ಜಾನುವಾರುಗಳ ಮೇವಿನ ಸಮಸ್ಯೆಯೂ ನೀಗಲಿದೆ.
ಆದರೆ ಈ ವರ್ಷ ಇದುವರೆಗೂ ಹಿಂಗಾರು ಮಳೆ ಆಗದಿರುವುದು ರೈತರನ್ನು ಚಿಂತೆಗಿಡು ಮಾಡಿದೆ. ಈ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಮುರ್ಲಾಪುರ ಗ್ರಾಮದ ಶ್ರೀಆದಿಶಕ್ತಿ ಯುವಕ ಸಂಘ, ಶ್ರೀ ಅನ್ನದಾನೇಶ್ವರ ಭಜನಾ ಸಂಘ ಹಾಗೂ ಗ್ರಾಮಸ್ಥರು ನಿರಂತರ ಒಂದು ವಾರ ಮಡಿ ಉಡಿಯಿಂದ ಸಪ್ತಭಜನೆ ಆರಂಭಿಸಿದ್ದಾರೆ.
ಆರು ತಾಸಿಗೊಂದು ಪಾಳಿಯಂತೆ ದಿನದಲ್ಲಿ ನಾಲ್ಕು ಪಾಳಿಯಲ್ಲಿ ನಿರಂತರ ಓಂ ನಮಃ ಶಿವಾಯ ಸ್ತುತಿ ಮಾಡುತ್ತಿದ್ದಾರೆ. ಭಾನುವಾರ ಪ್ರಾರಂಭವಾದ ಶಿವಸ್ತುತಿ ಭಜನಾ ಕಾರ್ಯಕ್ರಮ ಶನಿವಾರ ಅನ್ನ ಸಂತರ್ಪಣೆ ಕಾರ್ಯದೊಂದಿಗೆ ಮುಕ್ತಾಯವಾಗಲಿದೆ. ಈ ಶುಭ ಕಾರ್ಯ ಮುಗಿಯುವುದರೊಳಗೆ ಮಳೆಯಾಗುತ್ತದೆ ಎನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ.
ಪ್ರಸಕ್ತ ವರ್ಷ ಮುಂಗಾರು ಮಳೆ ಇಲ್ಲದೆ ರೈತರು ಕಂಗೆಟ್ಟಿದ್ದಾರೆ. ಜಾನುವಾರುಗಳ ಗೋಳು ಹೇಳತೀರದಾಗಿದೆ. ಕಡೇ ಪಕ್ಷ ಹಿಂಗಾರು ಮಳೆ ಅದರೆ ರೈತರ ಕಷ್ಟ ಬಗೆ ಹರಿಯಲಿದೆ. ಗ್ರಾಮದ ಸಕಲರು ಸೇರಿ ಮಳೆಗಾಗಿ ಪ್ರಾರ್ಥಿಸಿ ಶಿವನಾಮ ಸ್ಮರಣೆ ಮಾಡುತ್ತಿದ್ದೇವೆ.ಅಂದಾನಗೌಡ ಪೋಲಿಸ್ ಪಾಟೀಲ, ಮುರ್ಲಾಪುರ ಗ್ರಾಮಸ್ಥ
ಗ್ರಾಮ ಮಳೆಯಾಶ್ರಿತ ಭೂಮಿಯನ್ನೇ ಅವಲಂಬಿಸಿದೆ. ಮುಂಗಾರು ಕೈಕೊಟ್ಟು ಬಿತ್ತಿದ ಬೆಳೆ ಹಾಳಾಗಿದೆ. ಹಿಂಗಾರು ಮಳೆಯಾದರೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ಜತೆಗೆ ರೈತರಿಗೂ ಅನುಕೂಲವಾಗುತ್ತದೆ. ಶೀಘ್ರವೇ ಮಳೆಯಾದರೆ ಹಿಂಗಾರು ಬಿತ್ತನೆ ನಡೆಯಲಿದೆ. ಮಳೆಗಾಗಿ ಪ್ರಾರ್ಥಿಸಿ ಭಜನೆ ಮಾಡುತ್ತಿದ್ದೇವೆ. ಸುರೇಶ ಚನ್ನಳ್ಳಿ, ಮುರ್ಲಾಪುರ ಗ್ರಾಮಸ್ಥ