ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸುರಿದ ಮಳೆ

New Rain
Published on

ಹುಬ್ಬಳ್ಳಿ : ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಸುಮಾರು ಒಂದು ತಾಸು ಗುಡುಗು, ಸಿಡಿಲು ಮಿಶ್ರಿತ ಧಾರಾಕಾರ ಮಳೆ ಸುರಿದಿದ್ದು, ಕುಂದಗೋಳ ತಾಲೂಕಿನಲ್ಲಿ ಯುವಕನೊಬ್ಬ ಸಿಡಿಲು ಬಡಿದು ಸಾವಿಗೀಡಾಗಿದ್ದಾನೆ.

ಕಳೆದ ಎರಡ್ಮೂರು ದಿನಗಳಿಂದ ಆಗಾಗ್ಗೆ ಮಳೆ ಸುರಿಯುತ್ತಿದೆ. ಆದರೆ, ಮಂಗಳವಾರ ಮಧ್ಯಾಹ್ನ ಗುಡುಗು, ಸಿಡಿಲಿನ ಆರ್ಭಟ ಹೆಚ್ಚಾಗಿತ್ತು. ಕುಂದಗೋಳ ತಾಲೂಕಿನ ಹಿರೆನರ್ತಿ ಗ್ರಾಮದಲ್ಲಿ ಮೈಲಾರೆಪ್ಪ ಬಸಪ್ಪ ಉಣಕಲ್ (20) ಎಂಬ ಯುವಕ ಸಿಡಿಲು ಬಡಿದು ಮಂಗಳವಾರ ಮಧ್ಯಾಹ್ನ ಸಾವಿಗೀಡಾಗಿದ್ದಾನೆ.

ಎತ್ತುಗಳ ಮೈ ತೊಳೆಯಲು ಕೆರೆಗೆ ತೆರಳಿದ್ದ ಮೈಲಾರೆಪ್ಪ, ಮಳೆ ಸುರಿಯುತ್ತಿದ್ದಂತೆಯೇ ಕೆರೆ ದಂಡೆಯಲ್ಲಿದ್ದ ಮರದ ಕೆಳಗೆ ನಿಂತಿದ್ದಾನೆ. ಆ ಸಮಯದಲ್ಲಿ ಸಿಡಿಲು ಬಡಿದು ಸಾವಿಗೀಡಾಗಿದ್ದಾನೆ.

ಇನ್ನೂ, ಸತತ ಮಳೆಯಿಂದಾಗಿ ಹುಬ್ಬಳ್ಳಿ ಗೋಪನಕೊಪ್ಪದ ಸಿದ್ರಾಮೇಶ್ವರ ನಗರದಲ್ಲಿ ರಮೇಶ ಬೇವಿನಕಟ್ಟಿ ಎಂಬುವವರ ಮನೆ ಸೋಮವಾರ ರಾತ್ರಿ ಭಾಗಶಃ ಬಿದ್ದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

ಹುಬ್ಬಳ್ಳಿ ಶಹರ ತಹಸೀಲ್ದಾರ ಕಲಗೌಡ ಪಾಟೀಲ ಅವರು ಮಂಗಳವಾರ ಮಧ್ಯಾಹ್ನ ಗೋಕುಲ ರಸ್ತೆ, ಕನ್ಯಾನಗರ, ರೈಲ್ವೆ ಕಾಲನಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಪರಿಶೀಲಿಸಿದ್ದಾರೆ.

ಹುಬ್ಬಳ್ಳಿ ಶಹರ ತಾಲೂಕಿನಲ್ಲಿ ಮಳೆ ಮಾಪನ ಕೇಂದ್ರ ಕೆಟ್ಟಿದ್ದರಿಂದ ಮಳೆ ಎಷ್ಟು ಸುರಿದಿದೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. ಮಂಗಳವಾರ ಮಧ್ಯಾಹ್ನ ಸುರಿದ ಮಳೆಯಿಂದಾಗಿ ಹುಬ್ಬಳ್ಳಿ ಹಾಗೂ ಸುತ್ತಲಿನ ಪ್ರದೇಶದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಯಾವುದೇ ರೀತಿಯ ಹಾನಿಯಾಗಿಲ್ಲ.

ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕವಿದಿತ್ತು. ಮಧ್ಯಾಹ್ನ ಸುಮಾರು 2 ಗಂಟೆಯ ನಂತರ ಸುರಿದ ಮಳೆಯೊಂದಿಗೆನೇ ಗುಡುಗು, ಸಿಡಿಲಿನ ಆರ್ಭಟವೂ ಆರಂಭಗೊಂಡಿತು. ನಿರಂತರ ಗುಡುಗು, ಸಿಡಿಲಿನಿಂದಾಗಿ ಬೀದಿ ವ್ಯಾಪಾರಸ್ಥರು, ಪಾದಚಾರಿಗಳು, ಬೈಕ್ ಸವಾರರು ಅಕ್ಕಪಕ್ಕದ ಕಟ್ಟಡಗಳ ಮೊರೆ ಹೋದರು. ಕೆಲವರು ಸುರಿಯುತ್ತಿರುವ ಮಳೆ ಮಧ್ಯೆಯೇ ಸಂಚರಿಸುತ್ತಿದ್ದ ದೃಶ್ಯವೂ ಕಂಡುಬಂದಿತು.

ಹೊಲಗಳ ರಸ್ತೆಗಳು, ನಗರ ಪ್ರದೇಶದ ಹೊರ ಬಡಾವಣೆಯ ರಸ್ತೆಗಳು ಕೆಸರುಮಯವಾಗಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿವೆ. ಧಾರಾಕಾರ ಮಳೆಯಿಂದಾಗಿ ಗಟಾರುಗಳು, ರಾಜ ಕಾಲುವೆಗಳು ತುಂಬಿ ಹರಿಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net