

ಬೆಟಗೇರಿ: ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಶನಿವಾರ ಬೆಳಗಿನ ಜಾವ ಧಾರಾಕಾರ ಸುರಿದ ಮಳೆಗೆ ಹಳ್ಳಗಳು ತುಂಬಿಹರಿದವು.
ಬೆಳಗಿನ ಜಾವ 4ರಿಂದ ಆರಂಭಗೊಂಡ ಮಳೆ ಬೆಳಗ್ಗೆ 9.30ರ ವರೆಗೆ ನಿರಂತರವಾಗಿ ಸುರಿಯಿತು. ಇದರಿಂದ ಹಳ್ಳಿಗಳಲ್ಲಿನ ಮಣ್ಣಿನ ಮಾಳಿಗೆಯ ಮನೆಗಳು ಸೋರಲು ಆರಂಭಿಸಿದ್ದರಿಂದ ಬೆಳ್ಳಂಬೆಳ್ಳಗ್ಗೆ ಬಹುತೇಕ ಜನ ತಮ್ಮ ಮನೆಯೊಳಗಿನ ಮಳೆ ನೀರನ್ನು ಹೊರಹಾಕಲು ಹರಸಾಹಸ ಪಟ್ಟರು.
ಈ ಭಾಗದಲ್ಲಿ ಪ್ರಸಕ್ತ ವರ್ಷ ಮುಂಗಾರು ಮಳೆಗಳಲ್ಲಿ ಶನಿವಾರ ಸುರಿದ ಮಳೆ ಉತ್ತಮವಾಗಿದ್ದು, ರೈತರಿಗೆ ಖುಷಿಯಾಗಿದೆ. ಕಬ್ಬು ಬೆಳೆಗೆ ಈ ಮಳೆ ಅನುಕೂಲವಾಯಿತು ಎಂದು ರೈತ ಮಾಯಪ್ಪ ಬಾಣಸಿ ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಗ್ರಾಮದ ಪಕ್ಕದಲ್ಲಿರುವ ಹಳ್ಳ ತುಂಬಿ ಹರಿದಿದ್ದರಿಂದ ದನ-ಕರುಗಳಿಗೆ ಮೇವು ತರಲು ರೈತರು ಹಲವು ಗಂಟೆಗಳ ಕಾಲ ಪರದಾಡಿದರು. ಜನ ಜೀವನ ಅಸ್ತವ್ಯಸ್ತಗೊಂಡಿತ್ತು.