

ಕಾರವಾರ: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಉತ್ತಮ ಮಳೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಆಗಾಗ ಮಳೆ ಬಂದು, ಹೋಗುತ್ತಿದ್ದು, ಇಡೀ ದಿನ ಮೋಡ ಕವಿದ ವಾತಾವರಣವಿತ್ತು. ಗಾಳಿಯೂ ಇರುವುದರಿಂದ ಹಲವೆಡೆ ಮರ ಬಿದ್ದು, ವಿದ್ಯುತ್ ವ್ಯತ್ಯಯವಾಗಿದೆ. ಮನೆಗಳಿಗೆ ಹಾನಿಯಾಗಿದೆ.
ಕಾರವಾರದಲ್ಲಿ ವಿವಿಧ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿತು. ಹಣಕೋಣ ಗ್ರಾಪಂ ವ್ಯಾಪ್ತಿಯ ಹೋಟೆಗಾಳಿಯಲ್ಲಿ ನೀರು ಹರಿದು ಹೋಗಲು ಜಾಗವಿಲ್ಲದ ಕಾರಣ ಅಂಗಡಿಯೊಂದರ ಎದುರು ನೀರು ತುಂಬಿಕೊಂಡಿತ್ತು.
ಇನ್ನೂ ನಾಲ್ಕು ದಿನ ಇದೇ ಮಾದರಿಯಲ್ಲಿ ಹದವಾಗಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಜೂನ್ 27 ಹಾಗೂ 28 ರಂದು ಆರೇಂಜ್, 29 ಹಾಗೂ 30 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೂನ್ 29 ರವರೆಗೆ ಅರಬ್ಬಿ ಸಮುದ್ರದಲ್ಲಿ ಗಂಟೆಗೆ 35 ರಿಂದ 55 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. 3.7 ರಿಂದ 3.9 ಮೀಟರ್ ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ.
ಮಳೆಯ ಪ್ರಮಾಣ:
ಬುಧವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳಲ್ಲಿ ಅಂಕೋಲಾ-78.1 ಮಿಮೀ, ಭಟ್ಕಳ-95.3 ಮಿಮೀ, ಹಳಿಯಾಳ-5.9, ಹೊನ್ನಾವರ-96.9, ಕಾರವಾರ-62.5, ಕುಮಟಾ-95.4, ಮುಂಡಗೋಡ-7.6, ಸಿದ್ದಾಪುರ-52.8, ಶಿರಸಿ-43.8, ಜೊಯಿಡಾ-24.4, ಯಲ್ಲಾಪುರ-32.8, ದಾಂಡೇಲಿ-11 ಮಿಮೀ ಮಳೆಯಾಗಿದೆ.