ಗದ್ದೆಯಲ್ಲೇ ಮೊಳಕೆಯೊಡೆದ ಭತ್ತ

paddy
Published on

ಮೂಡಿಗೆರೆ: ತಾಲೂಕಿನ ಹಲವು ಪ್ರದೇಶಗಳಲ್ಲಿ ಅಕಾಲಿಕ ಮಳೆಯಿಂದ ಹಾನಿಯಾದ ಭತ್ತದ ಗದ್ದೆಗಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ವೀಕ್ಷಿಸಿದರಲ್ಲದೇ ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಕಸಬಾ ಹಾಗೂ ಗೋಣಿಬೀಡು ಹೋಬಳಿ ವ್ಯಾಪ್ತಿಯಲ್ಲಿ ಅಕಾಲಿಕ ಮಳೆಯಿಂದ ಹಾನಿಯಾದ ಭತ್ತದ ಗದ್ದೆಗಳಲ್ಲಿ ಬುಧವಾರ ತಾಪಂ ಸದಸ್ಯ ಕೆ.ಸಿ.ರತನ್ ಅಧಿಕಾರಿಗಳೊಂದಿಗೆ ವೀಕ್ಷಿಸಿದರು. ಅಕಾಲಿಕ ಮಳೆಯಿಂದ ಭತ್ತ ಮೊಳಕೆಯೊಡೆದು ಉಪಯೋಗಕ್ಕೆ ಬಾರದಂತಾಗಿದೆ. ಕಾಫಿ ಕೊಯ್ಲು ಮಾಡಲು ಸಾಧ್ಯವಾಗದೆ ಹಣ್ಣಾಗಿ ಉದುರಿದೆ. ಹಾನಿಯನ್ನು ಶಾಸಕರು, ವಿಧಾನಪರಿಷತ್ ಸದಸ್ಯರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಪರಿಹಾರ ನೀಡಲು ತಾಪಂ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು.

ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ಯೋಗೇಶ್, ತಾಪಂ ಅಧ್ಯಕ್ಷೆ ಭಾರತಿ ರವೀಂದ್ರ, ಸದಸ್ಯ ದೇವರಾಜು, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಮಾ, ತೋಟಗಾರಿಕೆ ಅಧಿಕಾರಿ ಅಕ್ಷಯ್, ಆರ್​ಐ ಸಿ.ಆರ್.ಬಾಬು, ವಿಎ ಜಯಪ್ರಕಾಶ್, ಹೆಸಗಲ್ ಪಿಡಿಒ ಸಲೀಂ ಇತರರಿದ್ದರು.

816 ಹೆಕ್ಟೇರ್ ಭತ್ತ ಬೆಳೆ ನಾಶ: ಕೃಷಿ ಇಲಾಖೆಯಿಂದ ಭತ್ತದ ಬೆಳೆ ನಾಶದ ವರದಿ ಸಿದ್ಧಪಡಿಸಲಾಗಿದೆ. ಬಾಳೂರು ಹೋಬಳಿಯಲ್ಲಿ 79 ಹೆಕ್ಟೇರ್, ಬಣಕಲ್ 250, ಗೋಣಿಬೀಡು 223, ಕಳಸ 132, ಕಸಬಾ 132 ಹೀಗೆ ಒಟ್ಟು 816 ಹೆಕ್ಟೇರ್ ಪ್ರದೇಶಲ್ಲಿ ಭತ್ತದ ಬೆಳೆ ನಾಶವಾಗಿದೆ. ಕಳೆದ ಮುಂಗಾರು ಪೂರ್ವದಲ್ಲಿ ಬೆಳೆ ನಷ್ಟ ಉಂಟಾದಾಗ 2.5 ಎಕರೆಗೆ ತಲಾ 6,800 ರೂ. ಪರಿಹಾರ ನೀಡಲಾಗಿತ್ತು. ಈಗ ಮತ್ತೆ ಬೆಳೆ ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಎಂ.ತಿರುಮಲೇಶ್ ತಿಳಿಸಿದರು.

ಫಸಲು ನೀರುಪಾಲು: ಬಾಳೆಹೊನ್ನೂರು: ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ ಬಿ.ಕಣಬೂರು ಗ್ರಾಪಂನ ತಲವಾನೆ ಕೃಷಿಕ ಟಿ.ಎಂ.ಗುರುಮೂರ್ತಿ ಗೌಡ ಎಂಬುವರ ಗದ್ದೆಗಳು ಸಂಪೂರ್ಣ ಜಲಾವೃತಗೊಂಡು ಕಟಾವು ಮಾಡಿ ಹಾಕಿದ್ದ ಭತ್ತದ ಫಸಲು ಸಂಪೂರ್ಣ ಮೊಳಕೆಯೊಡೆದಿದೆ.

ಕಟಾವು ಮಾಡಿ ಹಾಕಿದ ಒಂದೆರಡು ದಿನಗಳಲ್ಲಿ ಅಕಾಲಿಕ ಮಳೆಯಾಗಿದ್ದು, ಭತ್ತದ ಫಸಲು ಮನೆಗೆ ತರಲು ಆಗಲಿಲ್ಲ. ಎರಡ್ಮೂರು ದಿನ ಸತತ ಮಳೆ ಬಂದಿದ್ದರಿಂದ ಭತ್ತ ಹಾನಿಯಾಗಿದೆ.

ಅಲ್ಲದೆ ಕಾಫಿ ಫಸಲು ಗಿಡದಿಂದ ಸಂಪೂರ್ಣ ಉದುರಿದೆ. ಇದರಿಂದಾಗಿ ಇವರ ಈ ವರ್ಷದ ಭತ್ತ ಹಾಗೂ ಕಾಫಿ ಫಸಲು ಸಂಪೂರ್ಣವಾಗಿ ನೆಲ ಕಚ್ಚಿದೆ.

ಫಸಲು ನಷ್ಟವಾಗಿರುವ ಕುರಿತು ಪ್ರತಿಕ್ರಿಯಿಸಿರುವ ಕೃಷಿಕ ಟಿ.ಎಂ.ಗುರುಮೂರ್ತಿ, ನಮ್ಮ ಕೃಷಿ ಭೂಮಿಯಲ್ಲಿ ಎರಡು ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ದೆ. ಮಳೆಯಿಂದಾಗಿ ಮೊಳಕೆಯೊಡೆದು ನಷ್ಟ ಸಂಭವಿಸಿದೆ. ಇದರಿಂದ ವರ್ಷದ ಶ್ರಮ ವ್ಯರ್ಥವಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೂಡಲೇ ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net